ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಗ್ರಾಮದಲ್ಲಿ ‘ಶವ ಹೂತು ಹಾಕಲಾಗಿದೆ’ ಪ್ರಕರಣ ಸೋಮವಾರ ಹೊಸ ತಿರುವು ಪಡೆದಿದೆ.
ಸೋಮವಾರ ಪಾಯಿಂಟ್ 10ರ ಬದಲು ಪಾಯಿಂಟ್ 11ರಲ್ಲಿ ಹಠಾತ್ ಅಗೆತ ನಡೆಸಲಾಗಿದ್ದು, ದಿನಪೂರ್ತಿ ಅಲ್ಲಿ ನಡೆದ ಬೆಳವಣಿಗೆ ಪ್ರಕರಣ ಇನ್ನಷ್ಟು ಕುತೂಹಲ ಕೆರಳಿಸಲು ಕಾರಣವಾಗಿದೆ.
ಏನಾಯಿತು ಸೋಮವಾರ?
ಮುಸುಕುಧಾರಿ ಅನಾಮಿಕ, ಎ.ಸಿ. ಸ್ಟೆಲ್ಲಾ ವರ್ಗೀಸ್, ಅಽಕಾರಿ ಜಿತೇಂದ್ರ ದಯಾಮ್ ಸಹಿತ ವೈದ್ಯರ ಟೀಂ ಸೋಮವಾರ ಬೆಳಿಗ್ಗೆ 11.30ರ ವೇಳೆಗೆ ಪಾಯಿಂಟ್ 10ರಲ್ಲಿ ಉತ್ಖನನ ಪ್ರಕ್ರಿಯೆ ಅರಂಭಿಸಬೇಕಿತ್ತು. ಸ್ನಾನಘಟ್ಟದ ಸನಿಹ, ಹೆದ್ದಾರಿಯ ಬದಿಯಲ್ಲಿಯೇ ಇರುವ ಈ ಸ್ಥಳ ಅಗೆಯಲು ಹಿಟಾಚಿಯೂ ಸಿದ್ಧವಾಗಿತ್ತು. ಆದರೆ ಮಹತ್ವದ ಬೆಳವಣಿಗೆಯಲ್ಲಿ ಪಾಯಿಂಟ್ ಅಗೆಸದೆ ದೂರುದಾರ ತಂಡವನ್ನು ಕಾಡಿನ ಮೇಲ್ಭಾಗಕ್ಕೆ ಕರೆದುಕೊಂಡು ಹೋಗಿದ್ದಾನೆ. ಕೂಲಿಯಾಳುಗಳು ಸೇರಿದಂತೆ ಮೇಲ್ಭಾಗಕ್ಕೆ ಹೋದ ತಂಡ ಗಂಟೆ ಕಳೆದರೂ ಕೆಳಗೆ ಬಂದಿಲ್ಲ. ಇದೆಲ್ಲದರ ಮಧ್ಯೆ ಉಪ್ಪಿನ ಮೂಟೆಗಳನ್ನು ಕಾಡಿನೊಳಗೆ ಸಾಗಿಸುತ್ತಿದ್ದ ದೃಶ್ಯಗಳು ನೆರೆದಿದ್ದವರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದವು. ಬೆಳಿಗ್ಗೆ 11.30ಕ್ಕೆ ತೆರಳಿದ ತಂಡ ಸಂಜೆ 5 ಗಂಟೆಯಾದರೂ ಹೊರಗೆ ಬಂದಿಲ್ಲ. ಜೊತೆಗೆ ಎಂದಿನಂತೆ ಮಧ್ಯಾಹ್ನ ಊಟವೂ ರವಾನೆಯಾಗಿರುವುದು ಕಂಡು ಬಂದಿಲ್ಲ. ಇವೆಲ್ಲ ಬೆಳವಣಿಗೆಗಳು ಕಾಡಿನಲ್ಲಿ ನಾಲ್ಕೈದು ವರ್ಷಗಳ ಹಿಂದೆ ಸಾವನ್ನಪ್ಪಿದ್ದ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆಯಾ ಎಂಬ ಅನುಮಾನಕ್ಕೆ ಪುಷ್ಟಿ ನೀಡಿವೆ.
ಉತ್ಖನನ ಸ್ಥಳದಿಂದ ಕೆಲವೊಂದು ವಸ್ತುಗಳನ್ನು ವೈದ್ಯರ ತಂಡ ಸೇಫ್ ಎವಿಡೆನ್ಸ್ ಬಾಕ್ಸ್‌ನಲ್ಲಿ ಸಂಗ್ರಹಿಸಿ, ಉಳಿದೆಲ್ಲಾ ಮಹಜರು ಪ್ರಕ್ರಿಯೆಗಳನ್ನು ಮುಗಿಸಿ ಮುಸ್ಸಂಜೆಯಾಗುತ್ತಿದ್ದಂತೆ ಕಾಡಿನಿಂದ ಹೆದ್ದಾರಿಗೆ ಬಂದಿದೆ.
ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿಯ ತಮ್ಮ ಕಚೇರಿಗೆ ತೆರಳಿದ್ದು, ಆರನೇ ದಿನದ ಕಾರ್ಯಾಚರಣೆ ಅಂತ್ಯಗೊಂಡಿದೆ.