ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷವನ್ನು ಭರ್ಜರಿಯಾಗಿ ವೆಲ್ಕಂ ಮಾಡಲು ಜನರು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಬೆಂಗಳೂರಿನ ಎಂಜಿ ರೋಡ್‌ನಲ್ಲಿ ಕುಣಿದು ಕುಪ್ಪಳಿಸಲು ಯುವ ಸಮೂಹ ಸಜ್ಜಾಗಿದೆ.
ಇತ್ತ ಪೊಲೀಸರು ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಇಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ನೇತೃತ್ವದಲ್ಲಿ ಹೋಟೆಲ್, ಪಬ್ ಮತ್ತು ಬಾರ್ ಮಾಲೀಕರ ಜೊತೆ ಸಭೆ ನಡೆಯಿತು. ಸಿಸಿಕ್ಯಾಮರಾ ಅಳವಡಿಕೆ, ಶಬ್ದ ಮಾಲಿನ್ಯ ಮತ್ತು ಹೆಣ್ಮಕ್ಕಳ ಸುರಕ್ಷತೆ ಸೇರಿದಂತೆ 30 ಸೂಚನೆಗಳನ್ನು ಕೊಟ್ಟಿದ್ದಾರೆ. ಇನ್ನು ಬಾರ್ ಮತ್ತು ಪಬ್ಗಳಿಗೆ ರಾತ್ರಿ 1 ಗಂಟೆವರೆಗೆ ಅವಕಾಶ ನೀಡಲಾಗಿದೆ.
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್, ಈಗಾಗಲೇ ಉಪವಿಭಾಗ, ಠಾಣಾ ವ್ಯಾಪ್ತಿಯಲ್ಲಿ ಎಲ್ಲಾ ಹೋಟೆಲ್, ಪಬ್ ಮತ್ತು ಬಾರ್ ಮಾಲೀಕರನ್ನು ಕರೆಸಿ ಮೀಟಿಂಗ್ ಮಾಡಲಾಗಿದೆ. ಜನದಟ್ಟಣೆ ನಿಯಂತ್ರಣ, ವಯೋಮಿತಿ, ಸಮಯ, ಸಿಸಿಕ್ಯಾಮರಾ ಅಳವಡಿಕೆ, ಶಬ್ದ ಮಾಲಿನ್ಯ, ಹೆಣ್ಮಕ್ಕಳ ಸುರಕ್ಷತೆ, ಎಂಟ್ರಿ, ಎಕ್ಸಿಟ್, ಫೈರ್ ಸೇಫ್ಟಿ, ಪಾರ್ಕಿಂಗ್ ಮತ್ತು ಮ್ಯಾನೇಜರ್, ಸಿಬ್ಬಂದಿ ಮದ್ಯಪಾನ ಮಾಡಿರಬಾರದು ಎಂದು ಮಾಲೀಕರಿಗೆ ಸೂಚಿಸಲಾಗಿದೆ ಎಂದರು.

