ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕರ್ನಾಟಕ ಪೊಲೀಸರು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ 2026ನ್ನು ಶಾಂತಿಯುತವಾಗಿ ಸ್ವಾಗತಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ರಾಜ್ಯಾದ್ಯಂತ ಸುಮಾರು 20 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜನರು ಜವಾಬ್ದಾರಿಯಿಂದ ಹೊಸ ವರ್ಷ ಆಚರಿಸಿದ್ದಾರೆ. ಎಲ್ಲೂ ಗಂಭೀರ ಘಟನೆಗಳು ಸಂಭವಿಸಿಲ್ಲ, ಟ್ರಾಫಿಕ್ ಸಮಸ್ಯೆಯೂ ಎದುರಾಗಿಲ್ಲ ಎಂದು ಹೇಳಿದರು. ರಾಜ್ಯವು ಶಾಂತಿಯ ವಾತಾವರಣದಲ್ಲಿ ಹೊಸ ವರ್ಷಕ್ಕೆ ಕಾಲಿಟ್ಟಿದೆ ಎಂದು ಅವರು ಸ್ಪಷ್ಟಪಡಿಸಿದರು.
ರಾತ್ರಿ ತಡವರೆಗೂ ಪಾರ್ಟಿಗಳು ನಡೆದರೂ, ಈ ಬಾರಿ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಜನಸಂದಣಿ ನಿರೀಕ್ಷೆಗಿಂತ ಕಡಿಮೆಯಾಗಿತ್ತು. ಇತ್ತೀಚೆಗೆ ನಡೆದ ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತ ಘಟನೆ ಹಿನ್ನೆಲೆ ಜನರು ಈ ಪ್ರಮುಖ ರಸ್ತೆಗಳತ್ತ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದರೆಂದು ತಿಳಿದುಬಂದಿದೆ. ಸಾಕಷ್ಟು ಮಂದಿ ಬೆಂಗಳೂರು ಹೊರವಲಯದ ಫಾರ್ಮ್‌ಹೌಸ್‌ಗಳು ಹಾಗೂ ರೆಸಾರ್ಟ್‌ಗಳಲ್ಲಿ ಹೊಸ ವರ್ಷ ಆಚರಣೆ ಮಾಡಿದರು.
ದೊಡ್ಡಬಳ್ಳಾಪುರ ಸಮೀಪ ಅನುಮತಿ ಇಲ್ಲದೆ ಪಾರ್ಟಿ ನಡೆಸುತ್ತಿದ್ದ ಫಾರ್ಮ್‌ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಕೆಲವೆಡೆ ಸಣ್ಣ ಮಟ್ಟದ ವಾಗ್ವಾದಗಳು ನಡೆದಿದ್ದರೂ, ಸಾವು–ನೋವು, ದೊಡ್ಡ ಹಿಂಸಾಚಾರ, ಕಾಲ್ತುಳಿತ ಅಥವಾ ಮಹಿಳೆಯರ ಮೇಲೆ ದೌರ್ಜನ್ಯ ಘಟನೆಗಳು ವರದಿಯಾಗಿಲ್ಲ.

