March 15, 2026
Sunday, March 15, 2026
spot_img

ಹರಿಣಗಳ ದಾಳಿಗೆ ತತ್ತರಿಸಿದ ನ್ಯೂಝಿಲೆಂಡ್: ಮೊದಲ ಟಿ20ಯಲ್ಲಿ ಸೌತ್ ಆಫ್ರಿಕಾಕ್ಕೆ ಭರ್ಜರಿ ಜಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೌಂಟ್ ಮೌಂಗನುಯಿನ ಬೇ ಓವಲ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಸೌತ್ ಆಫ್ರಿಕಾ ತಂಡವು ನ್ಯೂಝಿಲೆಂಡ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದರೂ ಸಹ ಬ್ಯಾಟಿಂಗ್‌ನಲ್ಲಿ ಎಡವಿದ ನ್ಯೂಝಿಲೆಂಡ್, ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಝಿಲೆಂಡ್ ತಂಡಕ್ಕೆ ಸೌತ್ ಆಫ್ರಿಕಾದ ಬೌಲರ್‌ಗಳು ಆರಂಭದಲ್ಲೇ ಸಿಂಹಸ್ವಪ್ನವಾದರು. ತಂಡದ ಮೊತ್ತ ಕೇವಲ 35 ರನ್ ಆಗುವಷ್ಟರಲ್ಲಿ 5 ಪ್ರಮುಖ ವಿಕೆಟ್‌ಗಳು ಉರುಳಿದ್ದವು. ಮಧ್ಯಮ ಕ್ರಮಾಂಕದಲ್ಲಿ ಜೇಮ್ಸ್ ನೀಶಮ್ (26) ಸ್ವಲ್ಪ ಮಟ್ಟದ ಹೋರಾಟ ನಡೆಸಿದರೂ, ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕಿವೀಸ್ ಪಡೆ 14.3 ಓವರ್‌ಗಳಲ್ಲಿ ಕೇವಲ 91 ರನ್‌ಗಳಿಗೆ ಆಲೌಟ್ ಆಯಿತು.

ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ಮಿಂಚಿದ ನ್ಕೊಬಾನಿ ಮೊಕೊಯೆನಾ 26 ರನ್‌ ನೀಡಿ 3 ವಿಕೆಟ್ ಪಡೆದು ನ್ಯೂಝಿಲೆಂಡ್ ಪತನಕ್ಕೆ ಕಾರಣರಾದರು. ಇವರಿಗೆ ಉತ್ತಮ ಸಾಥ್ ನೀಡಿದ ಜೆರಾಲ್ಡ್ ಕೋಟ್ಝಿ, ಕೇಶವ್ ಮಹಾರಾಜ್ ಮತ್ತು ಒರ್ಟ್ನಿಲ್ ಬಾರ್ಟ್‌ಮನ್ ತಲಾ 2 ವಿಕೆಟ್ ಕಬಳಿಸಿ ಕಿವೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು.

92 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ಸುಲಭವಾಗಿ ಗೆಲುವಿನ ನಗೆ ಬೀರಿದೆ. 16.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 93 ರನ್ ಗಳಿಸುವ ಮೂಲಕ 7 ವಿಕೆಟ್‌ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸೌತ್ ಆಫ್ರಿಕಾ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !