ಹೊಸದಿಗಂತ ಡಿಜಿಟಲ್ ಡೆಸ್ಕ್:
ವರದಕ್ಷಿಣೆ, ನಿವೇಶನಕ್ಕಾಗಿ ಪೀಡಿಸಿ ಮತ್ತು ಲೈಂಗಿಕ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸೋತೇನಹಳ್ಳಿ ಗ್ರಾಮದ ಉಪನ್ಯಾಸಕಿ ಪುಷ್ಪ (23) ಅವರು ವಿಷ್ಣುವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ (ಅ.20) ಬೆಳಕಿಗೆ ಬಂದಿದೆ. ಸಾಯುವ ಮುನ್ನ ಪುಷ್ಪ ಅವರು ಎಂಟು ನಿಮಿಷಗಳ ವಿಡಿಯೋ ಮಾಡಿ, ಪತಿಯ ಮನೆಯವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವುದು ಈಗ ಬಯಲಾಗಿದೆ.
ಸಾವಿಗೆ ಕಾರಣವಾಯ್ತು ವರದಕ್ಷಿಣೆ ದುರಾಸೆ
ಮೂಲತಃ ತಪಸೀಹಳ್ಳಿ ಗ್ರಾಮದ ವೇಣು ಎಂಬುವವರ ಜೊತೆ ಪುಷ್ಪಾಳ ವಿವಾಹ ಒಂದೂವರೆ ವರ್ಷದ ಹಿಂದೆ ನೆರವೇರಿತ್ತು. ವಿವಾಹದ ನಂತರ ಪುಷ್ಪಾ ಅವರಿಗೆ ಪತಿಯ ಮನೆಯವರಿಂದ ಹೆಚ್ಚಿನ ವರದಕ್ಷಿಣೆ ಹಾಗೂ ನಿವೇಶನಕ್ಕಾಗಿ ತೀವ್ರ ಕಿರುಕುಳ ಆರಂಭವಾಗಿತ್ತು ಎಂದು ವೀಡಿಯೋದಲ್ಲಿ ಆರೋಪಿಸಲಾಗಿದೆ.
ಅಲ್ಲದೆ, ಪತಿಗೆ ಎರಡನೇ ಮದುವೆಯಾಗುವ ಆಸೆ ಇದ್ದು, ಅದಕ್ಕಾಗಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ. ಇಷ್ಟೇ ಅಲ್ಲದೆ, ಊಟದಲ್ಲಿ ವಿಷ ಹಾಕಿ ಕೊಲೆ ಮಾಡುವ ಹುನ್ನಾರವನ್ನೂ ಮಾಡಿದ್ದರು ಎಂದು ಪುಷ್ಪ ಅವರು ವಿಡಿಯೋದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಮೈದುನನ ಜೊತೆ ಮಲಗುವಂತೆ ಒತ್ತಾಯ!
ಪತಿಯ ಮನೆಯವರು ನಡೆಸುತ್ತಿದ್ದ ಕಿರುಕುಳದ ಪರಾಕಾಷ್ಠೆಯೆಂಬಂತೆ, ಮೈದುನನ ಜೊತೆ ಮಲಗುವಂತೆ ಸಹ ಬಲವಂತ ಮಾಡಿದ್ದಾರೆ ಎಂದು ಗೃಹಿಣಿ ಪುಷ್ಪ ವಿಡಿಯೋದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಈ ಎಲ್ಲಾ ದೌರ್ಜನ್ಯಗಳಿಂದ ನೊಂದ ಪುಷ್ಪ ಅವರು ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಬಳಿಕ ಸೋಮವಾರ (ಅ.20) ಘಾಟಿ ಬಳಿಯಿರುವ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ನ್ಯಾಯಕ್ಕೆ ಆಗ್ರಹ, ಆರು ಮಂದಿ ವಿರುದ್ಧ ದೂರು
ಪುಷ್ಪ ಅವರು ತಮ್ಮ ಮರಣೋತ್ತರ ವಿಡಿಯೋದಲ್ಲಿ, ತಮ್ಮ ಸಾವಿಗೆ ಗಂಡ ವೇಣು, ಅತ್ತೆ ಭಾರತಿ, ಮಾವ ಗೋವಿಂದಪ್ಪ, ಮೈದುನ ನಾರಾಯಣಸ್ವಾಮಿ ಸೇರಿದಂತೆ ಸಂಬಂಧಿಕರಾದ ಮುತ್ತೇಗೌಡ ಹಾಗೂ ಪಲ್ಲವಿ ಅವರ ಕಿರುಕುಳವೇ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇವರಿಗೆ ತಕ್ಕ ಶಿಕ್ಷೆ ನೀಡುವಂತೆ ಹಾಗೂ ತಮ್ಮ ಮೃತದೇಹವನ್ನ ಗಂಡನ ಮನೆಯೊಳಗೆ ಮಣ್ಣು ಮಾಡುವಂತೆ ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು, ವಿಡಿಯೋದಲ್ಲಿರುವ ಆರೋಪಗಳ ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಗಂಡ ಮತ್ತು ಮಾವನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.