ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯನಗರ ಜಿಲ್ಲೆಯ ಎರಡು ದಿನಗಳ ಪ್ರವಾಸವನ್ನು ಕೇಂದ್ರ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅಸಮಾಧಾನದೊಂದಿಗೆ ಮುಕ್ತಾಯಗೊಳಿಸಿದ್ದಾರೆ.
ಹಂಪಿಯ ಐತಿಹಾಸಿಕ ತಾಣಗಳ ನಿರ್ವಹಣೆ ಹಾಗೂ ಶಿಷ್ಟಾಚಾರ ಪಾಲನೆಯಲ್ಲಿ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್‌ಐ) ಹಂಪಿ ವಲಯ ಮತ್ತು ಜಿಲ್ಲಾ ಆಡಳಿತ ವಿಫಲವಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಹಂಪಿಯ ಕೋದಂಡರಾಮ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ, ದೇವಾಲಯದತ್ತ ಹೋಗುವ ಮಾರ್ಗದಲ್ಲಿ ಅಸ್ವಚ್ಛ ಪರಿಸ್ಥಿತಿ ಕಂಡು ಸಚಿವರು ಬೇಸರಗೊಂಡಿದ್ದಾರೆ. ಮಾನವ ಮಲ ಸೇರಿದಂತೆ ಅಶುಚಿತ್ವದ ದೃಶ್ಯಗಳು ಕಂಡುಬಂದಿದ್ದು, ಇದು ಯುನೆಸ್ಕೋ ವಿಶ್ವ ಪರಂಪರೆ ತಾಣದ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ಶೌಚಾಲಯಗಳ ಕೊರತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಾಮಾನ್ಯ ಪ್ರವಾಸಿಗರಿಗೆ ಆಗುವ ತೊಂದರೆ ಕುರಿತು ಚಿಂತೆ ವ್ಯಕ್ತಪಡಿಸಿದ್ದಾರೆ. ನಿರ್ವಹಣೆ ಹಾಗೂ ಅಭಿವೃದ್ಧಿ ಸಂಬಂಧಿಸಿದಂತೆ ಸಲ್ಲಿಸಲಾದ ಮನವಿಗಳ ನಡುವೆಯೂ ಅಗತ್ಯ ಕ್ರಮ ಕೈಗೊಳ್ಳದ ಎಎಸ್‌ಐ ಮತ್ತು ಜಿಲ್ಲಾ ಆಡಳಿತದ ಧೋರಣೆ ಬಗ್ಗೆ ಸಚಿವರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

