Wednesday, January 7, 2026

ಹಿರಿಯರಿಗೆ ಮನೆಬಾಗಿಲಲ್ಲೇ ಚಿಕಿತ್ಸೆ: ‘ಡೋರ್‌ಸ್ಟೆಪ್ ಹೆಲ್ತ್ ಕೇರ್’ ಘೋಷಿಸಿದ ನಿತೀಶ್ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಹಿರಿಯ ನಾಗರಿಕರಿಗೆ ಆಸ್ಪತ್ರೆ ಅಲೆದಾಟದಿಂದ ಮುಕ್ತಿ ನೀಡುವ ಮಹತ್ವದ ಹೆಜ್ಜೆಯನ್ನು ಬಿಹಾರ ಸರ್ಕಾರ ಇಟ್ಟಿದೆ. ಹಿರಿಯರ ಮನೆಬಾಗಿಲಿಗೆ ಆರೋಗ್ಯ ಸೇವೆ ತಲುಪಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಅಗತ್ಯವಿರುವ ಹಿರಿಯ ನಾಗರಿಕರಿಗೆ ಮನೆಲ್ಲಿಯೇ ವೈದ್ಯಕೀಯ ನೆರವು ಸಿಗುವಂತೆ ಮಾಡುವುದೇ ಸರ್ಕಾರದ ಉದ್ದೇಶ ಎಂದು ಹೇಳಿದ್ದಾರೆ. ರಕ್ತದೊತ್ತಡ ಪರೀಕ್ಷೆ, ಇಸಿಜಿ ಸೇರಿದಂತೆ ಅಗತ್ಯ ಆರೋಗ್ಯ ತಪಾಸಣೆಗಳು, ಶುಶ್ರೂಷಕರ ಸಹಾಯ ಹಾಗೂ ಮೂಲ ವೈದ್ಯಕೀಯ ಸೇವೆಗಳು ಅವಶ್ಯಕತೆಯ ಸಮಯದಲ್ಲಿ ನೇರವಾಗಿ ಮನೆಗಳಿಗೆ ತಲುಪಲಿವೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Rice series 46 | ಹುಳಿಹುಳಿಯಾಗಿರೋ ಲೆಮನ್ ಪೆಪ್ಪರ್ ರೈಸ್! ರೆಸಿಪಿ ಇಲ್ಲಿದೆ

‘ಸಾತ್ ನಿಶ್ಚಯ್’ (ಏಳು ನಿರ್ಣಯಗಳು) ಕಾರ್ಯಕ್ರಮದಡಿ ಹಿರಿಯ ನಾಗರಿಕರ ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತಂದು, ರಾಜ್ಯದ ಹಿರಿಯರಿಗೆ ಮನೆಲ್ಲಿಯೇ ಆರೋಗ್ಯ ಸೌಲಭ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಆರೋಗ್ಯ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ನಿತೀಶ್ ತಿಳಿಸಿದ್ದಾರೆ.

ರಾಜ್ಯದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಸಮಾಜದ ಎಲ್ಲ ವರ್ಗಗಳ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ನ್ಯಾಯದೊಂದಿಗೆ ಅಭಿವೃದ್ಧಿ ಎಂಬ ತತ್ವದಡಿ ಪ್ರತಿಯೊಬ್ಬ ನಾಗರಿಕನಿಗೂ ಗೌರವ ಮತ್ತು ಸಮಾನ ಅವಕಾಶ ಕಲ್ಪಿಸುವುದು ಸರ್ಕಾರದ ಧ್ಯೇಯವಾಗಿದೆ ಎಂದು ಹೇಳಿದ್ದಾರೆ.

error: Content is protected !!