ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್‌ನ ರಾಂಚಿಯ ಛತ್ರಾ ಜಿಲ್ಲೆಯಲ್ಲಿ ಪತನಗೊಂಡಿದ್ದ ಏರ್ ಅಂಬುಲೆನ್ಸ್‌ನಲ್ಲಿ ಬ್ಲ್ಯಾಕ್‌ಬಾಕ್ಸ್ ಇಲ್ಲ. ಹೀಗಾಗಿ ಇದು ತನಿಖೆಗೆ ಅಡ್ಡಿಯಾಗಿದೆ.
ಜಾರ್ಖಂಡ್‌ನ ರಾಂಚಿಯ ಛತ್ರಾ ಜಿಲ್ಲೆಯಲ್ಲಿ ಏರ್ ಅಂಬುಲೆನ್ಸ್ ಪತನಗೊಂಡಿತ್ತು. ವಿಮಾನದಲ್ಲಿ ಓರ್ವ ವೈದ್ಯ, ರೋಗಿ, ನಾಲ್ವರು ನರ್ಸ್‌ಗಳು ಹಾಗೂ ಇಬ್ಬರು ಪೈಲಟ್‌ಗಳಿದ್ದರು. ಸೋಮವಾರ (ಫೆ.23) ಸಂಜೆ 7:34ಕ್ಕೆ ಎಟಿಸಿಯಿಂದ ಸಂಪರ್ಕ ಕಡಿತಗೊಂಡಿದೆ. ಪೈಲೆಟ್ ಸೇರಿ ವಿಮಾನದಲ್ಲಿದ್ದ 7 ಮಂದಿ ಸಾವನ್ನಪ್ಪಿದ್ದಾರೆ.
ಇತ್ತ ಜಾರ್ಖಂಡ್ ಏರ್ ಆಂಬ್ಯುಲೆನ್ಸ್ ಕಪ್ಪು ಪೆಟ್ಟಿಗೆ ಇಲ್ಲದಿರುವುದು ಅಪಘಾತದ ನಿಗೂಢತೆಯನ್ನು ಹೆಚ್ಚಿಸಿದೆ. ವಿಮಾನವು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅಥವಾ ಫ್ಲೈಟ್ ಡೇಟಾ ರೆಕಾರ್ಡರ್ ಅನ್ನು ಒಳಗೊಂಡಿರುವ ಕಪ್ಪು ಪೆಟ್ಟಿಗೆಯನ್ನು ಹೊಂದಿರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
1987ರಲ್ಲಿ ತಯಾರಿಸಲಾದ ರೆಡ್‌ಬರ್ಡ್‌ನ ಬೀಚ್‌ಕ್ರಾಫ್ಟ್ ಸಿ90 (VT-AJV) ಅವಳಿ-ಟರ್ಬೊಪ್ರೊಪ್ ವಿಮಾನಕ್ಕೆ ಹಲವು ವಿನಾಯಿತಿಗಳನ್ನು ನೀಡಲಾಗಿತ್ತು. ಇದರ ಗರಿಷ್ಠ ಟೇಕ್ ಆಫ್ ತೂಕ 4,583 ಕೆ.ಜಿ. ಯಾಗಿತ್ತು. ಇದಕ್ಕೆ ವಾಯು ಯೋಗ್ಯತಾ ಪ್ರಮಾಣ ಪತ್ರವನ್ನು ಮೊದಲ ವರ್ಷವೇ ನೀಡಲಾಗಿತ್ತು. ಅದರ ಪ್ರಮಾಣೀಕರಣದ ಸಮಯದಲ್ಲಿ ಸಿವಿಆರ್ ಅಥವಾ ಎಫ್ ಡಿಆರ್ ಅನ್ನು ಹೊಂದುವುದು ಕಡ್ಡಾಯವಾಗಿರಲಿಲ್ಲ.
ಆದರೆ ಅದರ ಬಳಿಕ ವಾಯು ಯೋಗ್ಯತಾ ಪ್ರಮಾಣ ಪತ್ರಗಳನ್ನು ಪಡೆದ ಪ್ರಮಾಣೀಕೃತ ಟೇಕ್-ಆಫ್ ತೂಕ 5,700 ಕೆ.ಜಿ.ಗಿಂತ ಹೆಚ್ಚಿರುವ ವಿಮಾನಗಳಿಗೆ ಸಿವಿಆರ್ ಕಡ್ಡಾಯಗೊಳಿಸಲಾಗಿದೆ.
1990ರ ಬಳಿಕ ವಾಯು ಯೋಗ್ಯತಾ ಪ್ರಮಾಣ ಪತ್ರಗಳನ್ನು ಪಡೆದ 5,700 ಕೆ.ಜಿ. ಅಥವಾ ಅದಕ್ಕಿಂತ ಕಡಿಮೆ ಇರುವ ಬಹು-ಎಂಜಿನ್ ಟರ್ಬೈನ್-ಚಾಲಿತ ವಿಮಾನಗಳು ಕೂಡ ಎಫ್ ಡಿಆರ್ ಹೊಂದಿರಬೇಕು ಎನ್ನುವ ನಿಯಮವಿದೆ. ಆದರೆ ಇದೀಗ ಅಪಘಾತಕ್ಕೀಡಾದ ವಿಮಾನವು ಈ ನಿಯಮಗಳಿಗೆ ಒಳಪಟ್ಟಿರಲಿಲ್ಲ.ಹೀಗಾಗಿ ಅಲ್ಲಿ ಬ್ಲ್ಯಾಕ್‌ಬಾಕ್ಸ್ ಇರಲಿಲ್ಲ.
ವಾಯು ಸಂಚಾರ ನಿಯಂತ್ರಣ, ಅವಶೇಷಗಳ ವಿಶ್ಲೇಷಣೆ ಮತ್ತು ಪ್ರತ್ಯಕ್ಷದರ್ಶಿಗಳ ಸಂವಹನ ದಾಖಲೆಗಳ ಮೂಲಕ ಅಪಘಾತವನ್ನು ಪರಿಶೀಲಿಸಬೇಕಾಗುತ್ತದೆ. ಜೊತೆಗೆ ಅಪಘಾತಕ್ಕೀಡಾದ ವಿಮಾನದಲ್ಲಿನ ಹವಾಮಾನ ರೇಡಾರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲನೆ ನಡೆಯುತ್ತಿದೆ.



