March 13, 2026
Friday, March 13, 2026
spot_img

ಯಾವುದೇ ಶಕ್ತಿ ನನ್ನನ್ನು ತಡೆಯಲು ಸಾಧ್ಯವಿಲ್ಲ: ಬೆದರಿಕೆಗಳ ವಿರುದ್ಧ ಗುಡುಗಿದ ಬಂಗಾಳ ರಾಜ್ಯಪಾಲ ಬೋಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ಶಕ್ತಿಯು ತಮ್ಮನ್ನು ತಡೆಯಲು ಸಾಧ್ಯವಿಲ್ಲ, ರಾಜ್ಯದ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಶುಕ್ರವಾರ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಹೇಳಿದ್ದಾರೆ.

ಗುರುವಾರ ರಾತ್ರಿ ಇಮೇಲ್ ಮೂಲಕ ತಮಗೆ ಬಂದ ಜೀವ ಬೆದರಿಕೆಯನ್ನು ಉಲ್ಲೇಖಿಸಿದ ಬೋಸ್, ಇದು ‘ಬಂಗಾಳದ ಸಾಮಾನ್ಯ ಜನರಿಗಾಗಿ ನಾನು ನಡೆಸುತ್ತಿರುವ ಹೋರಾಟವನ್ನು ನಿಲ್ಲಿಸುವ ಪ್ರಯತ್ನ’ ಎಂದರು.

ನನಗೆ ಬೆದರಿಕೆ ಹಾಕಿರುವುದು ಇದೇ ಮೊದಲಲ್ಲ. ಬಂಗಾಳದ ಜನ ನನ್ನನ್ನು ರಕ್ಷಿಸುತ್ತಾರೆ. ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೆಯೂ ಕೋಲ್ಕತ್ತಾದ ಬೀದಿಗಿಳಿಯುವುದಾಗಿ ಬೋಸ್ ಹೇಳಿದರು.

ಬೆದರಿಕೆಗಳ ಮೂಲಕ ಬಂಗಾಳದ ಜನರಿಗಾಗಿ ಕೆಲಸ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. ಬಂಗಾಳ ನನ್ನ ಮನೆ, ನಾನು ಬಂಗಾಳದ ಮಗ. ಈ ಭೂಮಿಗಾಗಿ ನನ್ನ ಪ್ರಾಣವನ್ನು ತ್ಯಜಿಸಲು ನಾನು ಹೆದರುವುದಿಲ್ಲ ಎಂದು ಬೋಸ್ ತಿಳಿಸಿದ್ದಾರೆ.

ಕಳೆದ ವರ್ಷ ಮುರ್ಷಿದಾಬಾದ್ ಪ್ರವಾಸದಲ್ಲಿ ಯಾರೋ ಜೀವಂತ ದೇಶಿ ನಿರ್ಮಿತ ಬಾಂಬ್ ಹಸ್ತಾಂತರಿಸಿದ್ದರು. ನನ್ನ ಎಡಿಸಿ ತಕ್ಷಣ ಅದನ್ನು ತೆಗೆದುಕೊಂಡು ಹೋಗಿ ನೀರಿನ ಟಬ್‌ನಲ್ಲಿ ಇಟ್ಟರು ಎಂದು ಅವರು ಹೇಳಿದರು.

ನಿನ್ನೆ ರಾತ್ರಿ ಬೋಸ್ ಅವರಿಗೆ ಇಮೇಲ್ ಮೂಲಕ ಕೊಲೆ ಬೆದರಿಕೆ ಬಂದಿದ್ದು, ನಂತರ ಅವರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ರಾಜ್ಯಪಾಲರನ್ನು “ಸ್ಫೋಟಿಸುವುದಾಗಿ” ಇಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !