ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ಪಂದ್ಯ ಮುಗಿದ ಬಳಿಕ ಭಾರತೀಯ ಆಟಗಾರರು ಪಾಕಿಸ್ತಾನಿ ಕ್ರಿಕೆಟಿಗರೊಂದಿಗೆ ಕೈಕುಲುಕದೆ ಡ್ರೆಸ್ಸಿಂಗ್ ಕೊಠಡಿಗೆ ತೆರಳಿದ್ದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಕೆರಳಿಸಿತ್ತು. ಇದರಿಂದ ಅಸಮಾಧಾನಗೊಂಡಿರುವ ಪಿಸಿಬಿ, ಟೀಂ ಇಂಡಿಯಾ ಬಗ್ಗೆ ಐಸಿಸಿಗೆ ದೂರು ನೀಡಿತ್ತು. ಇದೀಗ ಬಿಸಿಸಿಐ (BCCI) ಈ ವಿಷಯದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದೆ.
ಹ್ಯಾಂಡ್‌ಶೇಕ್ ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಹತ್ವದ ಹೇಳಿಕೆ ನೀಡಿದ್ದು, ‘ಭಾರತದ ಗೆಲುವನ್ನು ಆಚರಿಸುವತ್ತ ಎಲ್ಲರೂ ಗಮನಹರಿಸಬೇಕೆ ಹೊರತು ವಿವಾದದತ್ತ ಅಲ್ಲ. ಟೀಂ ಇಂಡಿಯಾ ಅದ್ಭುತ ಗೆಲುವು ಸಾಧಿಸಿದೆ ಎಂದು ನಾನು ಹೇಳಬಲ್ಲೆ. ಭಾರತ ಪಾಕಿಸ್ತಾನದ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿದೆ. ನಾವು ಅದನ್ನು ಆನಂದಿಸಬೇಕು. ಅದನ್ನು ಬಿಟ್ಟು ಯಾವುದೇ ದೇಶ ಸೃಷ್ಟಿಸಿದ ಗದ್ದಲಕ್ಕೆ ನಾವು ಗಮನ ಕೊಡಬಾರದು. ಅದರಿಂದ ನಾವು ತಲೆಕೆಡಿಸಿಕೊಳ್ಳಬಾರದು. ನಮ್ಮ ಆಟಗಾರರ ಉತ್ತಮ ಪ್ರದರ್ಶನಕ್ಕಾಗಿ ನಾವು ಅವರನ್ನು ಪ್ರಶಂಸಿಸಬೇಕು ಮತ್ತು ಹೆಮ್ಮೆಪಡಬೇಕು. ಈ ಗೆಲುವಿನ ಓಟವು ಈ ಪಂದ್ಯಾವಳಿಯ ಅಂತಿಮ ಪಂದ್ಯದವರೆಗೂ ಮುಂದುವರಿಯುತ್ತದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
ಬಿಸಿಸಿಐನ ಅಧಿಕಾರಿಯೊಬ್ಬರು ಈ ಬಗ್ಗೆ ತಿಳಿಸಿದ್ದು, ‘ಪಂದ್ಯದ ನಂತರ ಉಭಯ ತಂಡಗಳ ಆಟಗಾರರು ಕೈಕುಲುಕಲೇಬೇಕೆಂಬ ಯಾವುದೇ ಕಡ್ಡಾಯ ನಿಯಮವಿಲ್ಲ. ನೀವು ನಿಯಮ ಪುಸ್ತಕವನ್ನು ಓದಿದರೆ, ಎದುರಾಳಿ ತಂಡದೊಂದಿಗೆ ಕೈಕುಲುಕಲು ಅದರಲ್ಲಿ ಯಾವುದೇ ನಿಯಮ ಬರೆಯಲಾಗಿಲ್ಲ. ಇದು ಸಂವಹನದ ಒಂದು ಸಾಧನ ಮಾತ್ರ. ಹೀಗಾಗಿ ಈ ವಿಷಯದಲ್ಲಿ ಭಾರತ ತಂಡ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.