ಮನೆಯನ್ನು ಸ್ವಚ್ಛವಾಗಿ ಮತ್ತು ಅಂದವಾಗಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಮನೆಯಲ್ಲಿ ದುರ್ವಾಸನೆ ಬಾರದಂತೆ ನೋಡಿಕೊಳ್ಳುವುದು. ಇದಕ್ಕಾಗಿ ಅನೇಕರು ರೂಮ್ ಫ್ರೆಶ್ನರ್‌ಗಳು ಅಥವಾ ದುಬಾರಿ ಲಿಕ್ವಿಡ್‌ಗಳನ್ನು ಬಳಸುತ್ತಾರೆ. ಆದರೆ, ಇನ್ನು ಮುಂದೆ ದುಬಾರಿ ಉತ್ಪನ್ನಗಳ ಚಿಂತೆ ಬಿಡಿ! ನಿಮ್ಮ ನೆಲ ಒರೆಸುವ ನೀರಿಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವೊಂದು ವಸ್ತುಗಳನ್ನು ಸೇರಿಸುವ ಮೂಲಕ ಮನೆಯನ್ನು ಪರಿಮಳಭರಿತವಾಗಿ ಇಡಬಹುದು ಮತ್ತು ನೆಲದಲ್ಲಿ ಅಂಟಿರುವ ಸೂಕ್ಷ್ಮ ಜೀವಿಗಳನ್ನು ಕೂಡ ತೊಡೆದು ಹಾಕಬಹುದು.
ನೆಲ ಒರೆಸುವ ನೀರಿಗೆ ಬೆರೆಸಬೇಕಾದ 6 ವಸ್ತುಗಳು:
ನಿಂಬೆ ರಸ: ನಿಂಬೆ ರಸದಲ್ಲಿ ಆಮ್ಲೀಯ ಗುಣಗಳಿದ್ದು, ಇದು ಸೂಕ್ಷ್ಮ ಜೀವಿಗಳನ್ನು ನಾಶಪಡಿಸುತ್ತದೆ. ಜೊತೆಗೆ, ನಿಂಬೆಯ ತಾಜಾ ವಾಸನೆ ಮನೆಯ ವಾತಾವರಣವನ್ನು ಹುರುಪಿನಿಂದ ಇರುವಂತೆ ಮಾಡುತ್ತದೆ. ನೆಲ ಒರೆಸುವಾಗ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ.
ಅಡಿಗೆ ಸೋಡಾ: ಒಂದು ಬಕೆಟ್ ನೀರಿಗೆ ಸುಮಾರು ಅರ್ಧ ಕಪ್ ಅಡಿಗೆ ಸೋಡಾ ಬೆರೆಸಿ. ಇದು ನೆಲವನ್ನು ತಾಜಾಗೊಳಿಸುವುದಲ್ಲದೆ, ನೆಲದ ಮೇಲಿರುವ ಜಿಡ್ಡಿನ ಕಲೆಗಳು ಮತ್ತು ಸೂಕ್ಷ್ಮ ಜೀವಿಗಳನ್ನು ಪರಿಣಾಮಕಾರಿಯಾಗಿ ತೊಡೆದುಹಾಕುತ್ತದೆ.
ನಿಂಬೆ ಎಸೆನ್ಷಿಯಲ್ ಆಯಿಲ್: ಈ ಎಣ್ಣೆಯನ್ನು ನೆಲ ಒರೆಸುವ ನೀರಿಗೆ ಸೇರಿಸುವುದರಿಂದ ನೆಲದ ಮೇಲಿನ ಎಣ್ಣೆಯ ಕಲೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಜೀವಾಣುಗಳನ್ನು ಕೊಲ್ಲುತ್ತದೆ ಮತ್ತು ಮನೆಗೆ ದೀರ್ಘಕಾಲದ ಉತ್ತಮ ಪರಿಮಳ ನೀಡುತ್ತದೆ.
ಟೀ ಟ್ರೀ ಆಯಿಲ್: ಟೀ ಟ್ರೀ ಎಣ್ಣೆಯು ಪ್ರಬಲ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಗೆ ಹೆಸರುವಾಸಿಯಾಗಿದೆ. ನೆಲ ಒರೆಸುವ ನೀರಿಗೆ ಇದನ್ನು ಸೇರಿಸಿದರೆ, ಅದು ಸೂಕ್ಷ್ಮ ಜೀವಿಗಳನ್ನು ನಾಶಪಡಿಸಿ, ನೆಲವನ್ನು ಸಂಪೂರ್ಣವಾಗಿ ತಾಜಾ ಮತ್ತು ಸ್ವಚ್ಛವಾಗಿ ಇಡುತ್ತದೆ.
ಸಿಟ್ರಸ್ ಹಣ್ಣಿನ ಸಿಪ್ಪೆ: ನಿಂಬೆ ಮತ್ತು ಕಿತ್ತಳೆಯಂತಹ ಸಿಟ್ರಸ್ ಹಣ್ಣಿನ ಸಿಪ್ಪೆಗಳು ನೈಸರ್ಗಿಕವಾಗಿ ಅತ್ಯುತ್ತಮ ಪರಿಮಳವನ್ನು ನೀಡುತ್ತವೆ. ಈ ಸಿಪ್ಪೆಗಳನ್ನು ಮೊದಲು ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತರ, ಆ ಪರಿಮಳಯುಕ್ತ ನೀರನ್ನು ನೆಲ ಒರೆಸುವ ನೀರಿಗೆ ಬೆರೆಸಿ ಬಳಸಿ. ಇದು ರಾಸಾಯನಿಕ ಮುಕ್ತ ಪರಿಹಾರವಾಗಿದೆ.
ಲ್ಯಾವೆಂಡರ್ ಎಣ್ಣೆ: ಒಂದು ಬಕೆಟ್ ನೀರಿಗೆ ಸ್ವಲ್ಪ ಅಡುಗೆ ಸೋಡಾ ಮತ್ತು ಕೆಲವು ಹನಿ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ. ಲ್ಯಾವೆಂಡರ್‌ನ ಸುವಾಸನೆಯು ಮನೆಯು ಪರಿಮಳಭರಿತವಾಗುವಂತೆ ಮಾಡುವುದರ ಜೊತೆಗೆ, ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ.

