Monday, January 12, 2026
Monday, January 12, 2026
spot_img

ಲಾರಿ ಬೇಡ, ರೈಲು ಸಾಕು: ಚಿತ್ರದುರ್ಗದ ಗಣಿ ಕಂಪನಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಹೊಸದಿಗಂತ ಚಿತ್ರದುರ್ಗ:

ಗಣಿ ಅದಿರು ಹೊತ್ತ ಲಾರಿಗಳ ನಿರಂತರ ಓಡಾಟದಿಂದಾಗಿ ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಗ್ರಾಮ ನರಕಸದೃಶವಾಗಿದೆ. ರಸ್ತೆಗಳ ದುಸ್ಥಿತಿ, ಧೂಳಿನಿಂದ ಹದಗೆಡುತ್ತಿರುವ ಜನರ ಆರೋಗ್ಯ ಹಾಗೂ ಬೆಳೆ ಹಾನಿಯನ್ನು ಖಂಡಿಸಿ ಭೀಮಸಮುದ್ರದ ನೂರಾರು ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಭೀಮಸಮುದ್ರ ಭಾಗದ ಗಣಿಗಳಿಂದ ಅದಿರು ಸಾಗಿಸುವ ಲಾರಿಗಳು ಹಗಲಿರುಳು ಸಂಚರಿಸುತ್ತಿದ್ದು, ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಅದಿರು ಚೆಲ್ಲಿ ರಸ್ತೆಗಳೆಲ್ಲಾ ಕೆಂಪುಮಯವಾಗಿವೆ. ಧೂಳು ಏಳಬಾರದೆಂದು ಗಣಿ ಕಂಪನಿಗಳು ರಸ್ತೆಗೆ ನೀರು ಹಾಕುತ್ತಿವೆ, ಆದರೆ ಇದರಿಂದ ರಸ್ತೆಯಲ್ಲಿರುವ ಆಳವಾದ ಗುಂಡಿಗಳು ವಾಹನ ಸವಾರರಿಗೆ ಕಾಣುತ್ತಿಲ್ಲ. ಪರಿಣಾಮವಾಗಿ ಅನೇಕ ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

“ಧೂಳಿನಿಂದಾಗಿ ಮಕ್ಕಳು ಹಾಗೂ ವೃದ್ಧರಿಗೆ ಕೆಮ್ಮು, ನೆಗಡಿ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ. ಮನೆಯ ಬಾಗಿಲು ಸದಾ ಮುಚ್ಚಿಕೊಂಡಿರಬೇಕಾದ ಅನಿವಾರ್ಯತೆ ಇದೆ. ರಾತ್ರಿ ವೇಳೆ ಖಾಲಿ ಲಾರಿಗಳ ಭೀಕರ ಶಬ್ದದಿಂದಾಗಿ ನೆಮ್ಮದಿಯ ನಿದ್ದೆಯೂ ಇಲ್ಲದಂತಾಗಿದೆ” ಎಂದು ಜನರು ತಮ್ಮ ಅಳಲು ತೋಡಿಕೊಂಡರು. ಜಮೀನುಗಳಲ್ಲಿ ಬೆಳೆದ ಬೆಳೆಗಳ ಮೇಲೆ ಧೂಳು ಕುಳಿತು ಕೃಷಿಯೂ ನಾಶವಾಗುತ್ತಿದೆ ಎಂದು ರೈತರು ದೂರಿದರು.

ಗ್ರಾಮದ ರಸ್ತೆಗಳ ಮೂಲಕ ಲಾರಿ ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಅದರ ಬದಲಿಗೆ ರೈಲ್ವೆ ವ್ಯಾಗಿನ್‌ಗಳ ಮೂಲಕ ಅದಿರು ಸಾಗಾಟ ಮಾಡಬೇಕು. ಇದರಿಂದ ಪರಿಸರ ಮಾಲಿನ್ಯ ತಡೆಯಬಹುದು ಮತ್ತು ಸಾರ್ವಜನಿಕರ ಜೀವ ರಕ್ಷಿಸಬಹುದು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಲಾಯಿತು. ಈ ಹಿಂದೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ದೂರು.

ಈ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಬಿ.ಇ. ಜಗದೀಶ್, ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರಮೂರ್ತಿ, ಪೂರ‍್ಯನಾಯ್ಕ್, ರಘು, ಈರಣ್ಣ, ಬಸವರಾಜು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ನೂರಾರು ರೈತ ಮುಖಂಡರು ಭಾಗವಹಿಸಿದ್ದರು.

Most Read

error: Content is protected !!