Tuesday, January 13, 2026
Tuesday, January 13, 2026
spot_img

ರೈತರ ಗೋಳು ಕೇಳುವವರೇ ಇಲ್ಲ: ಜನಪ್ರತಿನಿಧಿಗಳ ಮೋಜಿನ ತಾಣವಾದ ಬೆಳಗಾವಿ ಚಳಿಗಾಲದ ಅಧಿವೇಶನ

ವೆಂಕಟೇಶ್ ಮೊರಖಂಡಿಕರ

ಹೊಸದಿಗಂತ ಬೀದರ್:

ಬೆಳಗಾವಿಯ ಸುವರ್ಣ ಸೌಧದಲ್ಲಿ ಕಳೆದ ಹತ್ತು ದಿನಗಳಿಂದ ನಡೆದ ಚಳಿಗಾಲದ ಅಧಿವೇಶನವು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು, ಶಾಸಕರ ಪಾಲಿಗೆ ಒಂದು ‘ಪಿಕ್ನಿಕ್’ ಮತ್ತು ‘ಡಿನ್ನರ್’ ಕೂಟವಾಗಿ ಮಾರ್ಪಟ್ಟಿದ್ದು ದುರದೃಷ್ಟಕರ. ಜನರ ತೆರಿಗೆ ಹಣದಲ್ಲಿ ನೂರಾರು ಕೋಟಿ ಖರ್ಚು ಮಾಡಿ ನಡೆಸಲಾದ ಈ ಅಧಿವೇಶನವು ಕೇವಲ ‘ವ್ಯರ್ಥ ಆಲಾಪ’ಕ್ಕೆ ಸೀಮಿತವಾಯಿತು.

ಅಧಿವೇಶನದ ಮೊದಲ ದಿನ ಶೋಕ ಸಂತಾಪಕ್ಕೆ ಮೀಸಲಾದರೆ, ಉಳಿದ ದಿನಗಳು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪದಲ್ಲೇ ಕಳೆದುಹೋದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕ ಹಿತಾಸಕ್ತಿಗಿಂತ ಹೆಚ್ಚಾಗಿ ತಮ್ಮ ಕುರ್ಚಿಯನ್ನು ಬಲಪಡಿಸಿಕೊಳ್ಳುವ ಭಾಷಣಕ್ಕೆ ಪ್ರಾಧಾನ್ಯತೆ ನೀಡಿದರು. ಇನ್ನು ವಿರೋಧ ಪಕ್ಷಗಳು ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವ ಬದಲು ಚುಟುಕು ಕವನಗಳು ಮತ್ತು ಹಾಸ್ಯ ಪ್ರಸಂಗಗಳ ಮೂಲಕ ಕಾಲಹರಣ ಮಾಡಿ ‘ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್’ ನಡೆಸುತ್ತಿವೆಯೇ ಎಂಬ ಅನುಮಾನ ಮೂಡಿಸಿದೆ.

ರೈತರು ಮತ್ತು ಅಭಿವೃದ್ಧಿಯ ನಿರ್ಲಕ್ಷ್ಯ

ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಇನ್ನೂ ಪೂರ್ಣ ಪರಿಹಾರ ಸಿಕ್ಕಿಲ್ಲ. ನೆರೆ ರಾಜ್ಯಗಳಿಗೆ ಹೋಲಿಸಿದರೆ ಕಬ್ಬಿನ ಬೆಂಬಲ ಬೆಲೆ ಕಡಿಮೆಯಿದ್ದರೂ ಅದರ ಬಗ್ಗೆ ಚರ್ಚೆಯೇ ಆಗಲಿಲ್ಲ. ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನದ ಭರವಸೆ ಕೇವಲ ಮಾತಿನಲ್ಲೇ ಉಳಿಯಿತು.

ಉತ್ತರ ಕರ್ನಾಟಕದ 14 ಜಿಲ್ಲೆಗಳ ಅಭಿವೃದ್ಧಿಗೆ ಕೇವಲ 3,500 ಕೋಟಿ ರೂ. ಘೋಷಿಸಲಾಗಿದೆ. ಇದು ಬೆಂಗಳೂರಿನ ಅಭಿವೃದ್ಧಿಗೆ ಮೀಸಲಿಟ್ಟ ಹಣದ ಹತ್ತನೇ ಒಂದು ಭಾಗದಷ್ಟೂ ಇಲ್ಲದಿರುವುದು ಸರ್ಕಾರದ ನಿಷ್ಕಾಳಜಿಯನ್ನು ಎತ್ತಿ ತೋರಿಸುತ್ತದೆ.

ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಉತ್ತರ ಕರ್ನಾಟಕಕ್ಕೆ ಅನ್ವಯಿಸುತ್ತಿಲ್ಲ. ಕೈಗಾರಿಕೆ ಸ್ಥಾಪನೆಗೆ ಬೇಕಾದ ‘ಜೋನ್ 3’ ವ್ಯಾಪ್ತಿಯಲ್ಲಿ ಕಲ್ಯಾಣ ಕರ್ನಾಟಕದ ಯಾವುದೇ ಜಿಲ್ಲೆಯ ಹೆಸರಿಲ್ಲ. ಇದು ಕೇವಲ ಬೆಂಗಳೂರು ಸುತ್ತಮುತ್ತಲಿನ ಅಭಿವೃದ್ಧಿಗಷ್ಟೇ ಸೀಮಿತವಾದ ಯೋಜನೆಯಾಗಿದೆ.

ಆಡಳಿತ ವೈಫಲ್ಯ ಮತ್ತು ಹದಗೆಟ್ಟ ಕಾನೂನು ಸುವ್ಯವಸ್ಥೆ

ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಗುತ್ತಿಗೆ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳುಗಳಿಂದ ಸಂಬಳವಿಲ್ಲ. ಇನ್ನೊಂದೆಡೆ ಹಳ್ಳಿಹಳ್ಳಿಗಳಲ್ಲಿ ಸಾರಾಯಿ ಮಾರಾಟಕ್ಕೆ ಅಲಿಖಿತ ಅನುಮತಿ ಸಿಕ್ಕಂತಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದ್ದರೆ, ಅಧಿಕಾರಿಗಳು ‘ರೋಲ್ ಕಾಲ್’ ದಂಧೆಯಲ್ಲಿ ಮಗ್ನರಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಬೀದರ್ ಸಚಿವರ ಮೌನ: ನೊಂದಣಿ ಪ್ರಕ್ರಿಯೆ ಸ್ಥಗಿತ

ಬೀದರ್ ಮಹಾನಗರ ಪಾಲಿಕೆಯಾದ ನಂತರ ಹಳ್ಳಿಗಳ ಡಿಜಿಟಲ್ ಖಾತಾ ಮತ್ತು ನೊಂದಣಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದ್ದರೂ, ಜಿಲ್ಲೆಯ ಸಚಿವರಾದ ಈಶ್ವರ ಖಂಡ್ರೆ ಮತ್ತು ರಹೀಂ ಖಾನ್ ಅವರು ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಲಂಚಾವತಾರದ ನಡುವೆ ಸಾಮಾನ್ಯ ಜನರು ಕಚೇರಿಗಳಿಗೆ ಅಲೆಯುವಂತಾಗಿದೆ.

ಒಟ್ಟಾರೆಯಾಗಿ, ಜನರ ಸಮಸ್ಯೆಗಳ ಬಗ್ಗೆ ಸಂವೇದನೆ ಇಲ್ಲದ ಸರ್ಕಾರ ಮತ್ತು ಗಂಭೀರತೆ ಇಲ್ಲದ ವಿರೋಧ ಪಕ್ಷಗಳಿಂದಾಗಿ ಈ ಅಧಿವೇಶನವು ಕೇವಲ ‘ಶೋ’ ಆಗಿ ಮುಕ್ತಾಯಗೊಂಡಿದೆ. ಹಿಂದಿಯ “ಅಂಧೆರ್ ನಾಗ್ರಿ ಚೌಪತ್ ರಾಜಾ, ತಾಕಾ ಸೆರ್ ಭಜಿ ತಾಕಾ ಸೆರ್ ಖಾಜಾ” ಎನ್ನುವ ಗಾದೆಯಂತೆ ರಾಜ್ಯದ ಇಂದಿನ ಸ್ಥಿತಿ ನಿರ್ಮಾಣವಾಗಿದೆ.

Most Read

error: Content is protected !!