ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗುವಿಗೆ ಜನ್ಮಸಿದ್ಧ ಕಾಯಿಲೆ ಇದೆ ಎಂಬ ಕಾರಣ ಮುಂದಿಟ್ಟುಕೊಂಡು ತಂದೆಯೇ ಎರಡು ವರ್ಷದ ಮಗುವಿನ ಪ್ರಾಣ ಕಸಿದುಕೊಳ್ಳಲು ಯತ್ನಿಸಿದ ಅಮಾನವೀಯ ಘಟನೆ ನಗರದ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಕೋಲಾರ ಜಿಲ್ಲೆಯ ಹೂತಾಂಡಹಳ್ಳಿ ನಿವಾಸಿ ಮುನಿಕೃಷ್ಣ ಎಂಬ ವ್ಯಕ್ತಿ ಡಿಸೆಂಬರ್ 22ರಂದು ಕುಟುಂಬದವರೊಂದಿಗೆ ತಮಿಳುನಾಡಿನ ಬಾಗ್ಲೂರು ಪ್ರದೇಶದಲ್ಲಿರುವ ತನ್ನ ಅಜ್ಜಿ ಮನೆಗೆ ತೆರಳಿದ್ದ. ಅಲ್ಲಿ ಮಗುವನ್ನು ಒಬ್ಬಂಟಿಯಾಗಿ ನೋಡಿಕೊಳ್ಳುತ್ತಿದ್ದ ಸಂದರ್ಭದಲ್ಲೇ, ಆತ ಮಗುವಿಗೆ ವಿಷವುಣಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Snacks Series 4 | ಕ್ರೀಮಿ & ಟೇಸ್ಟಿ ಅಫ್ಘಾನಿ ಮೊಮೊಸ್ ಮಾಡೋದು ತುಂಬಾನೇ ಸುಲಭ!
ಸ್ವಲ್ಪ ಸಮಯದ ಬಳಿಕ ಮಗುವಿನ ಸ್ಥಿತಿ ಅಸಾಮಾನ್ಯವಾಗಿ ಕಾಣಿಸಿಕೊಂಡಾಗ, ತಾಯಿ ಮತ್ತು ಅಜ್ಜಿ ಸ್ಥಳಕ್ಕೆ ಧಾವಿಸಿ ವಿಚಾರಿಸಿದ ವೇಳೆ ಘಟನೆ ಬಹಿರಂಗವಾಗಿದೆ. ತಕ್ಷಣ ಮಗುವನ್ನು ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರು ಮುನಿಕೃಷ್ಣನನ್ನು ವಿಚಾರಣೆ ನಡೆಸಿದಾಗ, ಮಗುವಿಗೆ ಜನ್ಮಸಂಬಂಧಿ ಕಾಯಿಲೆ ಇದ್ದು, ಚಿಕಿತ್ಸೆ ವೆಚ್ಚ ಭರಿಸಲು ಹಣದ ಕೊರತೆ ಇರುವುದರಿಂದ ಈ ಕೃತ್ಯ ಎಸಗಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮಗುವಿನ ತಾಯಿ ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

