March 25, 2026
Wednesday, March 25, 2026
spot_img

ರಿಟೈರ್ಮೆಂಟ್ ಇಲ್ಲ, ಇದು ಕೇವಲ ಇಂಟರ್ವಲ್: ವಿಜಯ್ ಸಿನಿಮಾ ಭವಿಷ್ಯ ಈಗ ಚುನಾವಣಾ ಕಣದಲ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗಿದ್ದ ‘ಜನ ನಾಯಗನ್’ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ, ಸದ್ಯಕ್ಕೆ ಈ ಸಿನಿಮಾ ತೆರೆಕಾಣುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ವಿಜಯ್ ಅವರ ರಾಜಕೀಯ ಪ್ರವೇಶ. ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಮೂಲಕ ತಮಿಳುನಾಡು ಚುನಾವಣಾ ಕಣಕ್ಕಿಳಿದಿರುವ ವಿಜಯ್, ಸದ್ಯ ಸಂಪೂರ್ಣವಾಗಿ ರಾಜಕೀಯದಲ್ಲೇ ಬ್ಯುಸಿಯಾಗಿದ್ದಾರೆ.

ಆದರೆ, ವಿಜಯ್ ಅವರ ಸಿನಿಮಾ ಜರ್ನಿ ಇಲ್ಲಿಗೆ ಮುಗಿದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ಮುಂದಿನ ನಡೆ ಏನಿದ್ದರೂ ಅದು ಚುನಾವಣಾ ಫಲಿತಾಂಶದ ಮೇಲೆ ನಿಂತಿದೆ.

ವಿಜಯ್ ಅವರ ಟಿವಿಕೆ ಪಕ್ಷ ತಮಿಳುನಾಡಿನಲ್ಲಿ ಯಾವುದೇ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಗುರಿ ಹೊಂದಿದೆ. ಒಂದು ವೇಳೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಸಿಕ್ಕರೆ, ವಿಜಯ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ.

ಒಂದು ವೇಳೆ ರಾಜಕೀಯದಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೆ, ವಿಜಯ್ ಮತ್ತೆ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ಐದು ವರ್ಷಗಳ ಕಾಲ ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡುತ್ತಾ, ತೆರೆಮರೆಯಲ್ಲಿ ಪಕ್ಷವನ್ನು ಸಂಘಟಿಸುವ ಆಲೋಚನೆ ಅವರಲ್ಲಿದೆಯಂತೆ.

ಸಿನಿಮಾ ವಲಯದಲ್ಲಿ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ, ರಾಜಕೀಯ ಭವಿಷ್ಯ ಅತಂತ್ರವಾದರೆ ನಿರ್ದೇಶಕ ಅಟ್ಲಿ ಮತ್ತು ವಿಜಯ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ. ಅಟ್ಲಿ ಸದ್ಯ ಅಲ್ಲು ಅರ್ಜುನ್ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ ವೇಳೆಗೆ ವಿಜಯ್ ಹೊಸ ಸಿನಿಮಾ ಘೋಷಣೆಯಾಗುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !