ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಈಗಾಗಲೇ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಈಗ ಮತ್ತೊಂದು ಭಾರೀ ಮುಖಭಂಗವಾಗಿದೆ. ಶ್ರೀಲಂಕಾದಲ್ಲಿ ಪಂದ್ಯಗಳನ್ನು ಆಡುತ್ತಿದ್ದ ವೇಳೆ ಪಾಕಿಸ್ತಾನದ ಆಟಗಾರನೊಬ್ಬ ಹೋಟೆಲ್‌ನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧದ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನೆಲ್ಲಾ ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ತಂಡವು ಕ್ಯಾಂಡಿಯ ‘ಗೋಲ್ಡನ್ ಕ್ರೌನ್’ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಸಮಯದಲ್ಲಿ, ಆಟಗಾರನೊಬ್ಬ ಮಹಿಳಾ ಹೌಸ್‌ಕೀಪಿಂಗ್ ಸಿಬ್ಬಂದಿಯೊಂದಿಗೆ ಅತ್ಯಂತ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ಈ ವರ್ತನೆಯಿಂದ ಆಘಾತಕ್ಕೊಳಗಾದ ಹೋಟೆಲ್ ಆಡಳಿತ ಮಂಡಳಿಯು ತಕ್ಷಣವೇ ಪಾಕ್ ತಂಡದ ವ್ಯವಸ್ಥಾಪಕ ನವೀದ್ ಚೀಮಾ ಅವರಿಗೆ ದೂರು ನೀಡಿದೆ.
ದೂರಿನ ತೀವ್ರತೆಯನ್ನು ಅರಿತ ವ್ಯವಸ್ಥಾಪಕರು, ಕೂಡಲೇ ಸಂಬಂಧಪಟ್ಟ ಆಟಗಾರನಿಗೆ ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೆ, ಹೋಟೆಲ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಮುಂದೆ ಆಟಗಾರನನ್ನು ಕರೆತಂದು ಮಂಡಿಯೂರಿ ಕ್ಷಮೆಯಾಚಿಸುವಂತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯು ಪಾಕಿಸ್ತಾನದ ಸೂಪರ್-8 ಪಂದ್ಯಕ್ಕೂ ಮುನ್ನ ನಡೆದಿದೆ ಎನ್ನಲಾಗುತ್ತಿದ್ದು, ತಂಡದ ಶಿಸ್ತನ್ನು ಪ್ರಶ್ನೆ ಮಾಡುವಂತಿದೆ.
ಸದ್ಯಕ್ಕೆ ಆ ಕಪ್ಪು ಚುಕ್ಕೆ ಇಟ್ಟ ಆಟಗಾರನ ಹೆಸರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಗೌಪ್ಯವಾಗಿಟ್ಟಿದೆ. ಆದರೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿಯು, ಆಟಗಾರನನ್ನು ಪಾಕಿಸ್ತಾನಕ್ಕೆ ಮರಳಿದ ಕೂಡಲೇ ಶಿಸ್ತು ಸಮಿತಿಯ ಮುಂದೆ ಹಾಜರಾಗುವಂತೆ ಸೂಚಿಸಿದೆ.



