March 19, 2026
Thursday, March 19, 2026
spot_img

ಲಾಲ್​ಬಾಗ್​ನಲ್ಲಿ ಸುರಂಗ ಮಾರ್ಗಕ್ಕೆ ಮರ ಕಡಿಯಲ್ಲ: ಹೈಕೋರ್ಟ್​ಗೆ ರಾಜ್ಯ ಸರಕಾರ ಮಾಹಿತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್​ ಬೋರ್ಡ್​ವರೆಗಿನ ಉದ್ದೇಶಿತ ಜೋಡಿ ಸುರಂಗ ಮಾರ್ಗದ ಯೋಜನೆಗಾಗಿ ಲಾಲ್​ಬಾಗ್​ನಲ್ಲಿ ಮರಗಳನ್ನು ಕಡಿಯುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್​ಗೆ ತಿಳಿಸಿದೆ.

ಸುರಂಗ ಮಾರ್ಗದ ಟೆಂಡರ್ ರದ್ದು ಕೋರಿ ನಟ ಪ್ರಕಾಶ್ ಬೆಳವಾಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ. ಎಂ. ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ, ಸುರಂಗ ಮಾರ್ಗದ ಕಾಮಗಾರಿಗಾಗಿ ಲಾಲ್​ಬಾಗ್​ನಲ್ಲಿ ಮರಗಳನ್ನು ಕಡಿತ ಮಾಡಲಾಗುತ್ತಿದಿಯೇ ಎಂದು ಪ್ರಶ್ನಿಸಿತು. ಇದಕ್ಕೆ ರಾಜ್ಯ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಯಾವುದೇ ಮರ ಕಡಿಯುವುದಿಲ್ಲ ಎಂದು ವಿವರಿಸಿದರು.

ಇದಕ್ಕೆ ಪೀಠ, ಮುಂದಿನ ವಿಚಾರಣೆಯವರೆಗೆ ಲಾಲ್​ಬಾಗ್​ನಲ್ಲಿ ಯಾವುದೇ ಮರಗಳನ್ನು ಕತ್ತರಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಹೀಗಾಗಿ, ಯಾವುದೇ ಆದೇಶ ಅಥವಾ ಮಧ್ಯಂತರ ಆದೇಶ ಮಾಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿತು.

ಅರ್ಜಿದಾರರ ಪರ ವಾದಿಸಿದ ಸಂಸದ ತೇಜಸ್ವಿ ಸೂರ್ಯ, ಇದು ಕಾಗದದ ಮೇಲಿರುವ ಇನ್ನಷ್ಟೇ ಕಾರ್ಯಗತವಾಗಬೇಕಿರುವ ಯೋಜನೆಯಾದರೂ ಸರ್ಕಾರ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ ಎಂದರು.

ಈ ವೇಳೆ ಪೀಠ, ಇದೇ ಮನವಿಯನ್ನು ಹೊಂದಿರುವ ಮತ್ತೊಂದು ಅರ್ಜಿಯ ವಿಚಾರಣೆಯನ್ನು ಡಿ. 9ಕ್ಕೆ ನಿಗದಿಗೊಳಿಸಲಾಗಿದೆ. ಆ ಅರ್ಜಿಯಲ್ಲಿ ಲಾಲ್​ಬಾಗ್​ನಲ್ಲಿ ಮರಗಳನ್ನು ಕತ್ತರಿಸಲಾಗುತ್ತದೆಯೇ ಎಂದು ಸರ್ಕಾರವನ್ನು ಕೇಳಲಾಗಿತ್ತು. ಇದಕ್ಕೆ ಸರ್ಕಾರ ಇಲ್ಲ ಎಂದಿದೆ. ಹೀಗಾಗಿ, ನಿಮ್ಮ ವಾದವನ್ನೂ ಆಲಿಸಲಾಗುವುದು. ಅಷ್ಟರೊಳಗೆ ಸರ್ಕಾರವು ಆಕ್ಷೇಪಣೆ ಸಲ್ಲಿಸಬೇಕೆಂದು ತಿಳಿಸಿ ವಿಚಾರಣೆಯನ್ನು ನ್ಯಾಯಾಲಯವು ಡಿ. 9ಕ್ಕೆ ಮುಂದೂಡಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !