February 6, 2026
Friday, February 6, 2026
spot_img

ಸಿಮ್ ಇಲ್ಲದೆ ವಾಟ್ಸಪ್ ಇಲ್ಲ: ಕಮ್ಯುನಿಕೇಶನ್ ಆ್ಯಪ್‌ಗಳಿಗೆ ಸರ್ಕಾರದ ಬಿಗಿ ನಿಯಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರವು ಸೈಬರ್ ವಂಚನೆ ಮತ್ತು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಬಳಕೆದಾರರ ಮೊಬೈಲ್‌ನಲ್ಲಿ ಸಕ್ರಿಯ ಸಿಮ್ ಕಾರ್ಡ್ ಇದ್ದರೆ ಮಾತ್ರ ವಾಟ್ಸಪ್, ಟೆಲಿಗ್ರಾಮ್ ಸೇರಿದಂತೆ ಎಲ್ಲಾ ಆ್ಯಪ್ ಆಧಾರಿತ ಸಂವಹನ ಸೇವೆಗಳು ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಸೂಚನೆ ನೀಡಿದೆ.

ಈವರೆಗೆ, ಜನಪ್ರಿಯ ಮೆಸೇಜಿಂಗ್ ಆ್ಯಪ್‌ಗಳಾದ ವಾಟ್ಸಪ್, ಸಿಗ್ನಲ್, ಟೆಲಿಗ್ರಾಮ್, ಸ್ನ್ಯಾಪ್‌ಚಾಟ್, ಜಿಯೋಚಾಟ್, ಶೇರ್‌ಚಾಟ್ ಮುಂತಾದವುಗಳು ಒಟಿಪಿ ಮೂಲಕ ಒಮ್ಮೆ ಲಾಗಿನ್ ಆದ ನಂತರ, ಬಳಕೆದಾರರು ಸಿಮ್ ಕಾರ್ಡ್ ತೆಗೆದುಹಾಕಿದರೂ ಅಥವಾ ಬದಲಾಯಿಸಿದರೂ ಸಕ್ರಿಯವಾಗಿಯೇ ಇರುತ್ತಿದ್ದವು. ಈ ಲೋಪವನ್ನು ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ವಿದೇಶದಿಂದ ಕಾರ್ಯನಿರ್ವಹಿಸುವ ವಂಚಕರು, ಸಿಮ್‌ಗಳನ್ನು ನಿಷ್ಕ್ರಿಯಗೊಳಿಸಿದ ನಂತರವೂ ಈ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಅಪರಾಧಗಳನ್ನು ಎಸಗುತ್ತಿದ್ದಾರೆ. ಇದರಿಂದಾಗಿ, ವಂಚನೆಯ ಚಟುವಟಿಕೆಯನ್ನು ಪತ್ತೆಹಚ್ಚಲು ಅಗತ್ಯವಿರುವ ಕರೆ ದಾಖಲೆಗಳು ಮತ್ತು ಸ್ಥಳ ದಾಖಲೆಗಳನ್ನು ಪಡೆಯುವುದು ಅಸಾಧ್ಯವಾಗುತ್ತಿತ್ತು.

ಈ ಅಪಾಯಕಾರಿ ಕೃತ್ಯಗಳಿಗೆ ತಡೆಯೊಡ್ಡಲು, ಸರ್ಕಾರವು ನಿಯಮವನ್ನು ಬಿಗಿಗೊಳಿಸಿದೆ. ಈ ಹೊಸ ಆದೇಶವನ್ನು ಜಾರಿಗೊಳಿಸಲು, ಆ್ಯಪ್ ಆಧಾರಿತ ಸಂವಹನ ಕಂಪನಿಗಳಿಗೆ 120 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ದೂರಸಂಪರ್ಕ ಇಲಾಖೆಗೆ ಅನುಪಾಲನಾ ವರದಿಯನ್ನು ಸಲ್ಲಿಸುವುದು ಕಡ್ಡಾಯ.

ವರದಿ ಸಲ್ಲಿಸಲು ವಿಫಲವಾದರೆ, ದೂರಸಂಪರ್ಕ ಕಾಯ್ದೆ 2023, ಟೆಲಿಕಾಂ ಸೈಬರ್ ಭದ್ರತಾ ನಿಯಮ ಮತ್ತು ಇತರ ಕಾಯ್ದೆಗಳ ಅಡಿಯಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಕಂಪನಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ಈ ನಿಯಮವು ದೇಶದಲ್ಲಿ ಸೈಬರ್ ಭದ್ರತೆಯನ್ನು ಬಲಪಡಿಸುವ ಸರ್ಕಾರದ ಪ್ರಯತ್ನದ ಒಂದು ಭಾಗವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !