ಹೊಸದಿಗಂತ ಡಿಜಿಟಲ್ ಡೆಸ್ಕ್:
ಚರ್ಮರೋಗ ತಜ್ಞೆ ಡಾ.ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಪತಿ ಹಾಗೂ ಆರೋಪಿ, ಮಹೇಂದ್ರ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಿಂದ ಔಷಧಿಗಳನ್ನು ನಿಯಮಬಾಹಿರವಾಗಿ ತಂದಿದ್ದರ ಬಗ್ಗೆ ಮಾರತ್ತಹಳ್ಳಿ ಪೊಲೀಸರ ತನಿಖೆಯಲ್ಲಿ ಪತ್ತೆಹಚ್ಚಿದ್ದಾರೆ.
ಮಾರತ್ತಹಳ್ಳಿ ಪೊಲೀಸ್ ವರದಿಯ ಪ್ರಕಾರ, Not For Sale ಚಿಹ್ನೆಯೊಂದಿಗೆ ಲಭ್ಯವಾಗುವ ಗ್ಯಾಸ್ಟ್ರಿಕ್ ಔಷಧಿ, ಗ್ಲೂಕೋಸ್ ಬಾಟಲ್ ಸೇರಿದಂತೆ ಹಲವು ರಾಶಿ ರಾಶಿ ಔಷಧಿಗಳು ಕೃತಿಕಾ ರೆಡ್ಡಿ ಇರುವ ರೂಮಿನಲ್ಲಿ ಪತ್ತೆಯಾಗಿದೆ. ಮೃತ ವೈದ್ಯೆ ಕೃತಿಕಾ ರೂಮ್ ಅನ್ನು ಕ್ಲಿನಿಕ್ ಶೈಲಿಯಲ್ಲಿ ಪರಿವರ್ತಿಸಿದ್ದ. ಕೃತಿಕಾಳ ಋತುಚಕ್ರದ ಸಮಯದಲ್ಲೂ ಡ್ರಿಪ್ ಹಾಕಿಕೊಳ್ಳಲು ಮಹೇಂದ್ರ ಒತ್ತಾಯಿಸುತ್ತಿದ್ದ.
ಪೊಲೀಸರು ಪತ್ತೆ ಮಾಡಿದಂತೆ, ಡಾ. ಮಹೇಂದ್ರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿರುವುದರಿಂದ, ಆಸ್ಪತ್ರೆಯಲ್ಲಿ ಮುಕ್ತವಾಗಿ ಔಷಧ ವಹಿವಾಟು ನಡೆಸಲು ಸಾಧ್ಯವಾಗುತ್ತಿತ್ತು. ಇದರ ದುರ್ಬಳಕೆಯಾಗಿ, ಶಸ್ತ್ರಚಿಕಿತ್ಸೆ ವಿಭಾಗದಿಂದ ಅರಿವಳಿಕೆ ಮದ್ದನ್ನು ಸಹ ತಂದು, ಪತ್ನಿಯ ಬಲಗಾಲಿಗೆ ಚುಚ್ಚಿದ ಗುರುತುಗಳು ಪತ್ತೆಯಾಗಿವೆ. ಕ್ಯಾನುವಲ್ ಬಳಸಿ ಪತ್ನಿಯ ಕೈಗೆ ಗಾಯ ಮಾಡಿರುವುದು ಹಾಗೂ ಡ್ರಿಪ್ ಹಾಕಿರುವುದು ದೃಢಪಟ್ಟಿದೆ.
ಪೊಲೀಸರು ಮಹೇಂದ್ರ ರೆಡ್ಡಿಯ ಮನೆಯಲ್ಲಿರುವ ಲ್ಯಾಪ್‌ಟಾಪ್, ಹಾರ್ಡ್‌ಡಿಸ್ಕ್ ಮತ್ತು ಕಂಪ್ಯೂಟರ್‌ಗಳನ್ನು ಜಪ್ತಿ ಮಾಡಿದ್ದಾರೆ. ವಿಚಾರಣೆ ವೇಳೆ ಆರೋಪಿ ಹಲವು ಗೊಂದಲದ ಹೇಳಿಕೆಗಳನ್ನು ನೀಡಿದ್ದಾನೆ. ಕೊಲೆ ಹಿಂದಿನ ಆಸ್ತಿ ಆಸೆ, ಪತ್ನಿಯ ಅನಾರೋಗ್ಯದ ಪೂರ್ವಚಿಕಿತ್ಸೆ ಹಾಗೂ ಮಹೇಂದ್ರನ ಸಂಬಂಧಗಳ ಕುರಿತಂತೆ ಸಾಕ್ಷ್ಯಗಳು ಸೇರಿದಂತೆ ಪೊಲೀಸರ ಪರಿಶೀಲನೆ ಮುಂದುವರಿಯುತ್ತಿದೆ.