Tuesday, November 4, 2025

ಕೇವಲ ಕ್ಯಾಪ್ ಅಲ್ಲ, ನಿಮ್ಮ ಕಾರ್ಯಕ್ಷಮತೆಯೂ ಬದಲಾಗಲಿ: ಪೊಲೀಸರಿಗೆ ಪೀಕ್‌ ಕ್ಯಾಪ್‌ ವಿತರಿಸಿದ ಸಿಎಂ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಪೊಲೀಸ್‌ ಪೊಲೀಸ್‌ ಸಿಬ್ಬಂದಿ ತಲೆ ಮೇಲೆ ಕಾಣುವ ಬ್ರಿಟಿಷರ ಕಾಲದ ಟೋಪಿ ಮಾಯವಾಗಿ‌ ʼಪೀಕ್​ ಕ್ಯಾಪ್ʼ ಬಂದಿದೆ.​ ಸ್ಲೋಚ್‌ ಹ್ಯಾಟ್ ಬದಲಿಗೆ ರಾಜ್ಯ ಸರ್ಕಾರದಿಂದ ನೂತನ ಪೀಕ್ ಕ್ಯಾಪ್ ವಿತರಣೆ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್‌ ಅವರು ವಿಧಾನಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸ್‌ ಸಿಬ್ಬಂದಿಗೆ ಪೀಕ್‌ ಕ್ಯಾಪ್‌ ವಿತರಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಪ್ ವಿತರಣೆ, ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಹಾಗೂ ಸನ್ಮಿತ್ರ ಕಾರ್ಯಯೋಜನೆ ಕೈಪಿಡಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಡಿ.ಕೆ. ಶಿವಕುಮಾರ್‌, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಇಂದು ನಾನು ಬಿಡುಗಡೆ ಮಾಡಿದ ಪೀಕ್ ಕ್ಯಾಪ್ ಮಾದರಿಯನ್ನು ಆಯ್ಕೆ ಮಾಡಿದ್ದು ಕೂಡ ನಾನೇ. 1956 ರಿಂದ ಸುಮಾರು 70 ವರ್ಷಗಳಿಂದ ಇದ್ದ ಒಂದೇ ಮಾದರಿಯ ಕ್ಯಾಪ್ ಅನ್ನು ಇಂದು ಬದಲಾಯಿಸಿದ್ದೇವೆ. ಅಧಿಕಾರಿ ಮತ್ತು ಸಿಬ್ಬಂದಿಗೆ ಒಂದೇ ಮಾದರಿ ಕ್ಯಾಪ್ ಒದಗಿಸಲಾಗಿದ್ದು, ಇದರಿಂದ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿ. ಕೇವಲ ಕ್ಯಾಪ್ ಬದಲಾಗುವುದಲ್ಲ. ನಿಮ್ಮ ಕಾರ್ಯಕ್ಷಮತೆಯೂ ಬದಲಾಗಲಿ ಎಂದು ಕರೆ ನೀಡಿದರು.

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ, ಇದು ಪೊಲೀಸ್ ಇಲಾಖೆಯ ಗುರಿಯೂ ಆಗಲಿ. ಇದರಿಂದ ಇಡೀ ಕರ್ನಾಟಕ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ. ನಮ್ಮ ಯುವ ಶಕ್ತಿ, ಯುವಜನರ ಚೈತನ್ಯ ಮತ್ತು ಸಾಮರ್ಥ್ಯಗಳು ಮಾದಕ ವಸ್ತುಗಳಿಂದ ಬಲಿ ಆಗಬಾರದು. ಇದಕ್ಕೆ ಪೊಲೀಸ್ ಇಲಾಖೆ ಕಟಿಬದ್ಧ ನಿಲುವು ತಳೆಯಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಮಾದಕ ವಸ್ತು ಹಾವಳಿ ತಪ್ಪಿಸಲು ನಿಮ್ಮಿಂದ ಸಾಧ್ಯವಿದೆ. ನೀವು ಮನಸ್ಸು ಮಾಡಿದರೆ ಕರ್ನಾಟಕ ಪೊಲೀಸರ ಘನತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗುತ್ತದೆ. ಕೆಲವು ಪೊಲೀಸರು ರಿಯಲ್ ಎಸ್ಟೇಟ್ ಮಾಡುವವರ ಜತೆ, ಡ್ರಗ್ ಜಾಲದ ಜತೆ ಶಾಮೀಲಾಗಿರ್ತಾರೆ. ರೌಡಿಗಳನ್ನು ಮೊಳಕೆಯಲ್ಲೆ ಚಿವುಟಿ ಹಾಕುವುದು ಪೊಲೀಸರಿಂದ ಸಾಧ್ಯವಿದೆ. ಪೊಲೀಸರ ಬಗ್ಗೆ ಅಪರಾಧ ಜಗತ್ತಿಗೆ ಭಯ ಕಡಿಮೆಯಾಗಿದೆ. ಯಾಕೆ ಹೀಗಾಯ್ತು ಎಂದು ಆತ್ಮಸಾಕ್ಷಿಯನ್ನು ಕೇಳಿಕೊಳ್ಳಬೇಕು ಎಂದು ತಿಳಿಸಿದರು.

error: Content is protected !!