ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕವು ಕೇವಲ ಬಂಡವಾಳ ಹೂಡಿಕೆಯ ಭರವಸೆಗಳಿಗೆ ಸೀಮಿತವಾಗದೆ, ಅವುಗಳನ್ನು ವಾಸ್ತವಕ್ಕೆ ತರುವಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. 2025ರ ಫೆಬ್ರವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಘೋಷಣೆಯಾಗಿದ್ದ ಒಟ್ಟು 10.27 ಲಕ್ಷ ಕೋಟಿ ರೂ.ಗಳ ಪೈಕಿ, ಡಿಸೆಂಬರ್ ಅಂತ್ಯದ ವೇಳೆಗೆ 4.71 ಲಕ್ಷ ಕೋಟಿ ರೂ.ಗಳಷ್ಟು ನೈಜ ಹೂಡಿಕೆ ರಾಜ್ಯಕ್ಕೆ ಹರಿದುಬಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಜನವರಿ 19 ರಿಂದ 23 ರವರೆಗೆ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿರುವ ಸಚಿವರು, ಈ ಸಂದರ್ಭದಲ್ಲಿ ರಾಜ್ಯದ ಕೈಗಾರಿಕಾ ಕ್ಷೇತ್ರದ ಸಾಧನೆಗಳನ್ನು ತೆರೆದಿಟ್ಟರು. ಒಟ್ಟು ಹೂಡಿಕೆ ಒಡಂಬಡಿಕೆಗಳಲ್ಲಿ ಶೇ. 46ರಷ್ಟು ಈಗಾಗಲೇ ಕಾರ್ಯರೂಪಕ್ಕೆ ಬಂದಿರುವುದು ರಾಜ್ಯದ ಆರ್ಥಿಕತೆಗೆ ದೊಡ್ಡ ಬಲ ತುಂಬಿದೆ.
ಹೂಡಿಕೆದಾರರಿಗೆ ಪೂರಕ ವಾತಾವರಣ ನಿರ್ಮಿಸಲು ಸರ್ಕಾರವು ‘ಏಕಗವಾಕ್ಷಿ’ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದು ಸಂಪೂರ್ಣ ಡಿಜಿಟಲ್ ಆಗಿದ್ದು, 30ಕ್ಕೂ ಹೆಚ್ಚು ಇಲಾಖೆಗಳ 150ಕ್ಕೂ ಹೆಚ್ಚು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುತ್ತದೆ. ಭೂಮಿ ಮಂಜೂರಾತಿ ಮತ್ತು ಕಡ್ಡಾಯ ಅನುಮೋದನೆಗಳು ವೇಗವಾಗಿ ಸಿಗುತ್ತಿರುವುದರಿಂದ ಸೆಮಿಕಂಡಕ್ಟರ್, ಆಹಾರ ಸಂಸ್ಕರಣೆ ಮತ್ತು ಇಎಸ್‌ಡಿಎಂ ವಲಯಗಳಲ್ಲಿ ಹೂಡಿಕೆ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ ಎಂದು ಸಚಿವರು ವಿವರಿಸಿದ್ದಾರೆ.


