April 1, 2026
Wednesday, April 1, 2026
spot_img

ಪೆಟ್ರೋಲ್-ಗ್ಯಾಸ್ ಮಾತ್ರವಲ್ಲ, ಈಗ ‘ಸಿರಿಂಜ್’ ಸಂಕಷ್ಟ: ಯುದ್ಧದ ಕಿಚ್ಚಿಗೆ ವೈದ್ಯಕೀಯ ಕ್ಷೇತ್ರ ಸ್ತಬ್ಧ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧವು ಕೇವಲ ಗಡಿಗಳಿಗೆ ಸೀಮಿತವಾಗದೆ, ಜಾಗತಿಕ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ, ಈಗ ವೈದ್ಯಕೀಯ ವಸ್ತುಗಳ ಕೊರತೆಯ ದೊಡ್ಡ ಗಂಡಾಂತರ ಎದುರಾಗುವ ಆತಂಕ ಮೂಡಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಅತಿ ಹೆಚ್ಚು ಬಳಕೆಯಾಗುವ ಇಂಜೆಕ್ಷನ್ ಸಿರಿಂಜ್‌ಗಳು ಮತ್ತು ಐವಿ ಕ್ಯಾನಲ್‌ಗಳ ತಯಾರಿಕೆಗೆ ‘ಪಾಲಿ ಪ್ರೊಪಿಲಿನ್’ (Polypropylene) ಎಂಬ ಕಚ್ಚಾವಸ್ತು ಅತ್ಯಗತ್ಯ. ಇದು ಪೆಟ್ರೋಲಿಯಂನ ಉಪ ಉತ್ಪನ್ನವಾಗಿದ್ದು, ಯುದ್ಧದ ಕಾರಣದಿಂದಾಗಿ ಇದರ ಆಮದು ಸಂಪೂರ್ಣ ವ್ಯತ್ಯಯಗೊಂಡಿದೆ. ಇದರಿಂದಾಗಿ ದೇಶದ ಪ್ರಮುಖ ಫಾರ್ಮಾ ಉತ್ಪಾದನಾ ಘಟಕಗಳು ಕಚ್ಚಾವಸ್ತುಗಳಿಲ್ಲದೆ ಸೊರಗುತ್ತಿವೆ.

ಸದ್ಯ ಜನರ ಗಮನ ಕೇವಲ ಇಂಧನ ಬೆಲೆಗಳ ಮೇಲಿದೆ. ಆದರೆ ವೈದ್ಯಕೀಯ ವಸ್ತುಗಳ ಕೊರತೆಯು ನೇರವಾಗಿ ಜನರ ಪ್ರಾಣಕ್ಕೆ ಸಂಚಕಾರ ತರಬಲ್ಲದು. ಸಿರಿಂಜ್ ಮತ್ತು ಕ್ಯಾನಲ್‌ಗಳ ಬೆಲೆ ಏರಿಕೆಯಾಗುವುದರ ಜೊತೆಗೆ, ಅವುಗಳು ಮಾರುಕಟ್ಟೆಯಲ್ಲಿ ಸಿಗದಂತಹ ಸ್ಥಿತಿ ನಿರ್ಮಾಣವಾದರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಪರಿಸ್ಥಿತಿ ಹದಗೆಡಲಿದೆ.

ಯುದ್ಧದ ಕಾರ್ಮೋಡಗಳು ಬೇಗ ಸರಿಯದಿದ್ದರೆ, ಕೇವಲ ಆರ್ಥಿಕ ಸಂಕಷ್ಟ ಮಾತ್ರವಲ್ಲದೆ ಜಾಗತಿಕ ಮಟ್ಟದ ವೈದ್ಯಕೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗುವುದು ನಿಶ್ಚಿತ ಎಂದು ತಜ್ಞರು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !