April 5, 2026
Sunday, April 5, 2026
spot_img

ಚಿನ್ನಸ್ವಾಮಿ ಅಖಾಡದಲ್ಲಿ ಇವತ್ತು ರನ್ ಮಳೆ ಮಾತ್ರವಲ್ಲ, ಭದ್ರತೆಯೂ ಸಿಕ್ಕಾಪಟ್ಟೆ ಟೈಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಐಪಿಎಲ್ 2026ರ ಬಹುನಿರೀಕ್ಷಿತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ದಕ್ಷಿಣ ಭಾರತದ ಈ ಎರಡು ಬಲಿಷ್ಠ ತಂಡಗಳ ನಡುವಿನ ಹಣಾಹಣಿಯನ್ನು ವೀಕ್ಷಿಸಲು ಅಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದುಬರುವ ಸಾಧ್ಯತೆ ಇರುವುದರಿಂದ, ನಗರ ಪೊಲೀಸ್ ಇಲಾಖೆ ಸರ್ಪಗಾವಲು ಹಾಕಿದೆ.

ಸುಮಾರು 2,300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಕಳೆದ ಪಂದ್ಯದಲ್ಲಿ ಸುಮಾರು 70ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಕಳ್ಳತನವಾಗಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಬಾರಿ ವಿಶೇಷ ಜಾಗೃತಿ ವಹಿಸಿದ್ದಾರೆ. ಅಭಿಮಾನಿಗಳ ಅನುಕೂಲಕ್ಕಾಗಿ ಎರಡು ಬ್ಯಾಗೇಜ್ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ.

ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳ ಸಂಚಾರ ದಟ್ಟಣೆ ನಿಯಂತ್ರಿಸಲು BMTC ವತಿಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಮೆಟ್ರೋ ರೈಲು ಸಂಚಾರದ ಅವಧಿಯನ್ನು ವಿಸ್ತರಿಸಲಾಗಿದ್ದು, ಪಾರ್ಕಿಂಗ್‌ಗೆ ನಿಗದಿಪಡಿಸಿದ ಸ್ಥಳಗಳಲ್ಲೇ ವಾಹನ ನಿಲ್ಲಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.

ಟಿಕೆಟ್ ಇಲ್ಲದವರಿಗೆ ಸ್ಟೇಡಿಯಂ ಹತ್ತಿರ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲದೆ, ನಕಲಿ ಟಿಕೆಟ್ ಮಾರಾಟ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಮೇಲೆ ಸಿಸಿಬಿ ಅಧಿಕಾರಿಗಳು ತೀವ್ರ ನಿಗಾ ಇರಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !