ಬೆಳಗ್ಗಿನ ಓಡಾಟ, ಕೆಲಸದ ಒತ್ತಡದ ನಡುವೆ ಅನೇಕರು ಹಲ್ಲುಜ್ಜುವಂತಹ ಚಿಕ್ಕ ಆದರೆ ಮುಖ್ಯವಾದ ಅಭ್ಯಾಸವನ್ನು ಕಡೆಗಣಿಸುತ್ತಾರೆ. “ಒಂದು ದಿನ ಹಲ್ಲು ಉಜ್ಜದಿದ್ರೆ ಏನು ಆಗಲ್ಲ” ಅನ್ನೋ ಭಾವನೆ ಸಾಮಾನ್ಯ. ಆದರೆ ದಂತವೈದ್ಯರು ಎಚ್ಚರಿಸುತ್ತಾರೆ, ಹಲ್ಲುಜ್ಜದ ಪ್ರತಿದಿನವೂ ದೇಹದ ಆರೋಗ್ಯದ ಮೇಲೆ ನಿಧಾನವಾಗಿ ಆದರೆ ಗಂಭೀರ ಪರಿಣಾಮ ಬೀರುತ್ತದೆ ಅಂತ.
ಹಲ್ಲುಜ್ಜದೇ ಇದ್ದರೆ ಬಾಯಿಯಲ್ಲಿ ಏನಾಗುತ್ತದೆ?:
ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಪ್ರಕಾರ, ಆಹಾರ ಸೇವಿಸಿದ ಕೇವಲ 20 ನಿಮಿಷಗಳಲ್ಲಿ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಸಕ್ಕರೆ ಮತ್ತು ಪಿಷ್ಟವನ್ನು ಆಮ್ಲವಾಗಿ ಪರಿವರ್ತಿಸುತ್ತವೆ. ಈ ಆಮ್ಲವು ದಂತ ಕವಚವನ್ನು ಹಾನಿಗೊಳಿಸುತ್ತದೆ. 4–6 ಗಂಟೆಗಳಲ್ಲಿ ಹಲ್ಲುಗಳ ಮೇಲೆ ಪ್ಲೇಕ್ ಎಂಬ ಜಿಗುಟು ಪದರ ರಚನೆ ಶುರುವಾಗುತ್ತದೆ. 12 ಗಂಟೆಗಳಲ್ಲಿ ಇದು ಗಟ್ಟಿಯಾಗಿ ಟಾರ್ಟರ್ ಆಗಿ, 24 ಗಂಟೆಗಳಲ್ಲಿ ಒಸಡು ಊತ, ರಕ್ತಸ್ರಾವ ಹಾಗೂ ದುರ್ವಾಸನೆ ಆರಂಭವಾಗುತ್ತದೆ.
ಅಧ್ಯಯನ ಪ್ರಕಾರ, ಒಂದು ದಿನ ಹಲ್ಲುಜ್ಜದಿದ್ದರೆ ಸುಮಾರು ಒಂದು ಮಿಲಿಯನ್ ಬ್ಯಾಕ್ಟೀರಿಯಾಗಳು ಬಾಯಿಯಲ್ಲಿ ಬೆಳೆಯುತ್ತವೆ. ಇವು ರಕ್ತ ಪ್ರವಾಹಕ್ಕೆ ಸೇರಿ ಹೃದಯ ಕಾಯಿಲೆಯ ಅಪಾಯವನ್ನು ಮೂರು ಪಟ್ಟು ಹೆಚ್ಚಿಸಬಹುದು. ಶ್ವಾಸಕೋಶದ ಸೋಂಕು, ನ್ಯುಮೋನಿಯಾ ಹಾಗೂ ಬಾಯಿಯ ಕ್ಯಾನ್ಸರ್ ಅಪಾಯವೂ ಇದರಿಂದ ಹೆಚ್ಚುತ್ತದೆ.
ಸರಿಯಾದ ಹಲ್ಲುಜ್ಜುವ ವಿಧಾನ ಯಾವುದು?:
ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಟೂತ್‌ಪೇಸ್ಟ್ ಬಳಸಿ ಕನಿಷ್ಠ ಎರಡು ನಿಮಿಷ ಹಲ್ಲುಜ್ಜುವುದು ಅವಶ್ಯ. ಬ್ರಷ್ ಅನ್ನು 45 ಡಿಗ್ರಿ ಕೋನದಲ್ಲಿ ಹಿಡಿದು ನಿಧಾನವಾದ ವೃತ್ತಾಕಾರದ ಚಲನೆಯೊಂದಿಗೆ ಹಲ್ಲುಗಳು ಹಾಗೂ ಒಸಡುಗಳ ಬಳಿಯಲ್ಲಿ ಸ್ವಚ್ಛಗೊಳಿಸಬೇಕು. ಹೆಚ್ಚು ಒತ್ತಡ ಹಾಕುವುದು ಹಾನಿಕಾರಕ. ಜೊತೆಗೆ ಪ್ರತಿ 3–4 ತಿಂಗಳಲ್ಲಿ ಟೂತ್‌ಬ್ರಷ್ ಬದಲಾಯಿಸುವುದು ಅಗತ್ಯ.

