February 10, 2026
Tuesday, February 10, 2026
spot_img

ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್‌: ಕಾಂಗ್ರೆಸ್ ನಡೆಯನ್ನು ಟೀಕಿಸಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ ಆವರಣದಲ್ಲಿ ಕಾಂಗ್ರೆಸ್ ಸಂಸದರು ಪ್ರಧಾನಿ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಹೊತ್ತೋಯ್ದಿರುವುದು ಪ್ರಚೋದನಕಾರಿ ನೀತಿ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಗೆ ಆಗಮಿಸುವ ಮೊದಲು ಸಂಸತ್ತಿನಲ್ಲಿ ನಡೆದ ಘಟನೆ ತೀವ್ರ ಆಘಾತಕಾರಿ ಎಂದು ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಪೀಠದವರೆಗೂ, ಗದ್ದಲದ ನಡುವೆಯೂ ವಿರೋಧ ಪಕ್ಷದ ಸಂಸದರು ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಇವರದ್ದು ಚರ್ಚೆ ಆಗಿರಲಿಲ್ಲ. ಪ್ರತಿಭಟನೆಯೂ ಆಗಿರಲಿಲ್ಲ. ಇದು ಕೇವಲ ಉದ್ದೇಶಪೂರ್ವಕವಾದಂತಹ ಪ್ರಚೋದನೆಯಾಗಿತ್ತು ಎಂದು ಜೋಶಿ ಆರೋಪಿಸಿದ್ದಾರೆ.

ಒಬ್ಬ ಸಂಸದರಾಗಿ ಸದನದ ಘನತೆ ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಆದರೆ ಕಾಂಗ್ರೆಸ್ ಸಂಸದರ ನಡೆ ತೀವ್ರ ವಿರೋಧಾಭಾವಾಗಿದೆ ಎಂದು ಆಕ್ಷೇಪಿಸಿದ್ದಾರೆ.

ಸಂಸತ್ತಿನ ಆವರಣದೊಳಗೆ ಗೌರವಾನ್ವಿತ ಪ್ರಧಾನಿಯವರ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಹೊತ್ತೊಯ್ಯುವುದು ರಾಹುಲ್‌ಗಾಂಧಿ ಮತ್ತು ಕಾಂಗ್ರೆಸ್ ಅದೆಷ್ಟು ಕೆಳಮಟ್ಟಕ್ಕೆ ಇಳಿಯುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದ ಖಜಾನೆ ಖಾಲಿ ಮಾಡಿದವರು ಮೊದಲು ತಮ್ಮನ್ನೇ ಪ್ರಶ್ನಿಸಿಕೊಳ್ಳಲಿ: ಭಾರತ-ಅಮೇರಿಕಾ ವಾಣಿಜ್ಯ ಒಪ್ಪಂದ ಟೀಕಿಸುವ ಮೊದಲು ಸಿಎಂ ಸಿದ್ದರಾಮಯ್ಯ ಅವರು, ಆರ್ಥಿಕ ಸಂಪದ್ಭರಿತವಾಗಿದ್ದ ರಾಜ್ಯದ ಖಜಾನೆ ಖಾಲಿ ಮಾಡಿರುವ ಬಗ್ಗೆ ತಮ್ಮನ್ನೊಮ್ಮೆ ಪ್ರಶ್ನೆ ಮಾಡಿಕೊಳ್ಳಲಿ ಎಂದು ಜೋಶಿ ತಿರುಗೇಟು ನೀಡಿದ್ದಾರೆ.

ಆರ್ಥಿಕ ಸಂಪತ್ತಿನಿಂದ ಕೂಡಿದ್ದ ಕರ್ನಾಟಕದ ಖಜಾನೆಯನ್ನು ಕಾಂಗ್ರೆಸ್ ಸರ್ಕಾರ ಇಂದು ಖಾಲಿ ಮಾಡಿದ್ದಲ್ಲದೆ, ಸಂಪೂರ್ಣ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿದೆ ಮತ್ತು ಹೂಡಿಕೆದಾರರ ವಿಶ್ವಾಸವನ್ನು ಸಹ ಕಳೆದುಕೊಂಡಿದೆ. ಇದೆಲ್ಲಾ ಏಕೆ? ಎಂಬುದನ್ನು ಸಿಎಂ ಉತ್ತರಿಸಲಿ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಮೊದಲು ‘ಭಾರತದ ಹಿತಾಸಕ್ತಿ’ ಕುರಿತು ಉಪನ್ಯಾಸ ನೀಡುವುದೊಳಿತು. 2008ರಲ್ಲಿ 26/11ರ ನಂತರ ಮುಂಬೈ ಹೊತ್ತಿ ಉರಿಯುತ್ತಿದ್ದರೂ ಕಾಂಗ್ರೆಸ್ ಮೌನವಹಿಸಿತು. ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಗೃಹ ಸಚಿವರು ಬಾಹ್ಯ ರಾಜತಾಂತ್ರಿಕ ಒತ್ತಡಕ್ಕೆ ಮಣಿದ ಪರಿಣಾಮ ಭಾರತ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿತ್ತು ಎಂಬುದನ್ನು ಜೋಶಿ ಸಿಎಂಗೆ ನೆನಪಿಸಿದ್ದಾರೆ.

2020 ಮತ್ತು ಹಿಂದಿನ ವರ್ಷಗಳಲ್ಲಿ ನಮ್ಮ ಸೈನಿಕರು ಪಿಎಲ್‌ಎ ಆಕ್ರಮಣವನ್ನು ಎದುರಿಸುತ್ತಿದ್ದರೆ, ಇತ್ತ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ಚೀನಾದ ಅಧಿಕಾರಿಗಳೊಂದಿಗೆ ಗೌಪ್ಯ ಸಭೆ ನಡೆಸಿದರು. ಯಾವುದೊಂದು ಬಹಿರಂಗವಾಗದಂತೆ ನೋಡಿಕೊಂಡರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀತಿಗಳು ನಿಷ್ಕ್ರಿಯಗೊಂಡವು ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಭಾರತದ ನೀತಿಗಳನ್ನು ದುರ್ಬಲಗೊಳಿಸಿ, ಅವಮಾನಿಸಲಾಯಿತು, ಜಾಗತಿಕ ವಿಶ್ವಾಸ ಮತ್ತು ಕಾರ್ಯತಂತ್ರದ ನಿಲುವನ್ನು ಹಾಳು ಮಾಡಿತು. ಅಲ್ಪಾವಧಿಯ ರಾಜಕೀಯಕ್ಕಾಗಿ ಭಾರತದ ಸ್ಥಾನಮಾನವನ್ನು ದುರ್ಬಲಗೊಳಿಸಿತು. ಇದೆಲ್ಲಾ ಗೊತ್ತಿಲ್ಲದ ವಿಚಾರವೇ? ಎಂದು ಚಾಟಿ ಬೀಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ದೃಢತೆ, ಆತ್ಮವಿಶ್ವಾಸ ಮತ್ತು ಅತ್ಯಂತ ಸ್ಪಷ್ಟವಾಗಿ ಜಾಗತಿಕವಾಗಿ ಯಶಸ್ವಿ ಮಾತುಕತೆ ನಡೆಸುತ್ತಿದೆ. ಕಾಂಗ್ರೆಸ್ ಇದನ್ನು ಅರಿತುಕೊಳ್ಳಲಿ. ಏನೇನೋ ಬಡಬಡಿಸುವುದನ್ನು ನಿಲ್ಲಿಸಲಿ ಎಂದು ಸಚಿವ ಪ್ರಲ್ಹಾದ ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !