April 8, 2026
Wednesday, April 8, 2026
spot_img

ಆರ್‌ಎಸ್‌ಎಸ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಸಾಂನಲ್ಲಿ ಎಫ್‌ಐಆರ್ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ದಕ್ಷಿಣ ಅಸ್ಸಾಂನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದಾರೆನ್ನಲಾದ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘ ಈಗ ಕಾನೂನು ಹೋರಾಟಕ್ಕೆ ಇಳಿದಿದೆ. ಅಸ್ಸಾಂನ ಗುವಾಹಟಿಯ ಡಿಸ್‌ಪುರ ಮತ್ತು ಸಿಲ್ಚಾರ್ ಪೊಲೀಸ್ ಠಾಣೆಗಳಲ್ಲಿ ಆರ್‌ಎಸ್‌ಎಸ್‌ನ ಉತ್ತರ ಅಸ್ಸಾಂ ಮತ್ತು ದಕ್ಷಿಣ ಅಸ್ಸಾಂ ಘಟಕಗಳು ಪ್ರತ್ಯೇಕವಾಗಿ ದೂರು ದಾಖಲಿಸಿವೆ.

ವಿವಾದವೇನು?

ಶ್ರೀಭೂಮಿ ಜಿಲ್ಲೆಯ ಕರಿಮಗಂಜ್ ದಕ್ಷಿಣ ವಿಧಾನಸಭಾ ಕ್ಷೇತ್ರದ ನೀಲಂಬಜಾರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಖರ್ಗೆ ಅವರು, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಿದ್ಧಾಂತಗಳನ್ನು “ವಿಷಸರ್ಪ”ಕ್ಕೆ ಹೋಲಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

“ನೀವು ನಮಾಜ್ ಮಾಡುತ್ತಿರುವಾಗ ನಿಮ್ಮ ಮುಂದೆ ವಿಷಸರ್ಪವೊಂದು ಬಂದರೆ, ಪ್ರಾರ್ಥನೆ ನಿಲ್ಲಿಸಿ ಮೊದಲು ಆ ಹಾವನ್ನು ಕೊಲ್ಲಬೇಕು ಎಂದು ಕುರಾನ್ ಹೇಳುತ್ತದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೂಡ ಅದೇ ವಿಷಸರ್ಪದಂತೆ. ಇವುಗಳನ್ನು ನೀವು ತೊಡೆದುಹಾಕದಿದ್ದರೆ ನೀವು ಬದುಕಲು ಸಾಧ್ಯವಿಲ್ಲ,” ಎಂದು ಖರ್ಗೆ ಹೇಳಿದ್ದಾರೆನ್ನಲಾಗಿದೆ.

ಈ ಹೇಳಿಕೆಯು ಅತ್ಯಂತ ಪ್ರಚೋದನಕಾರಿಯಾಗಿದ್ದು, ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಹಿಂಸಾಚಾರಕ್ಕೆ ಪ್ರೇರೇಪಿಸುವಂತಿದೆ ಎಂದು ಸಂಘಟನೆ ವ್ಯಕ್ತಪಡಿಸಿದೆ. ಚುನಾವಣಾ ಪ್ರಚಾರದ ವೇಳೆ ಧಾರ್ಮಿಕ ಭಾವನೆಗಳನ್ನು ಬಳಸಿಕೊಂಡು ಸಮಾಜದಲ್ಲಿ ದ್ವೇಷ ಬಿತ್ತುವ ಪ್ರಯತ್ನ ಇದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಹೇಳಿಕೆಯು ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 83ರ ಅಡಿಯಲ್ಲಿ ಚುನಾವಣಾ ಅಕ್ರಮವಾಗಿದ್ದು, ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಹಿಂದು-ಮುಸ್ಲಿಂ ಸಮುದಾಯಗಳ ನಡುವೆ ಕೋಮು ಸಂಘರ್ಷ ಉಂಟುಮಾಡುವ ಸಂಚಾಗಿದೆ ಎಂದು ಆರ್‌ಎಸ್‌ಎಸ್ ವಾದಿಸಿದೆ.

ಇನ್ನು ಈ ವಿವಾದಕ್ಕೆ ಸಂಬಂಧಿಸಿದಂತೆ ಅಸ್ಸಾಂನಲ್ಲಿ ಕಾನೂನು ಸಮರ ಶುರುವಾಗಿದೆ. ಉತ್ತರ ಅಸ್ಸಾಂ ಪ್ರಾಂತದ ಪರವಾಗಿ ಖಗೇನ್ ಸೈಕಿಯಾ ಅವರು ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಮತ್ತು ದಕ್ಷಿಣ ಅಸ್ಸಾಂ ಪ್ರಾಂತದ ಪರವಾಗಿ ಜ್ಯೋತ್ಸ್ನಾಮಯ ಚಕ್ರವರ್ತಿ ಅವರು ಸಿಲ್ಚಾರ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.

ಪ್ರಜಾಪ್ರಭುತ್ವದ ಚರ್ಚೆಗಳು ಸಾಂವಿಧಾನಿಕ ಚೌಕಟ್ಟಿನಲ್ಲೇ ಇರಬೇಕು ಮತ್ತು ಸಾಮಾಜಿಕ ಶಾಂತಿಗೆ ಧಕ್ಕೆ ತರುವ ಭಾಷೆಯನ್ನು ಬಳಸಬಾರದು ಎಂದು ಆರ್‌ಎಸ್‌ಎಸ್ ಒತ್ತಿ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !