ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಹಾರ್ಮುಜ್ ಜಲಸಂಧಿಯನ್ನು ದಾಟಿದ ಕಚ್ಚಾ ತೈಲ ಟ್ಯಾಂಕರ್ ಭಾರತಕ್ಕೆ ತಲುಪಿದೆ. ಸೌದಿ ಅರೇಬಿಯಾದಿಂದ ಹೊರಟ ಲೈಬೀರಿಯಾ ಧ್ವಜದ ‘ಶೆನ್ಲಾಂಗ್ ಸೂಯೆಜ್‌ಮ್ಯಾಕ್ಸ್’ ಟ್ಯಾಂಕರ್ ಮುಂಬೈ ಬಂದರನ್ನು ತಲುಪಿದ್ದು, ಯುದ್ಧದ ನಂತರ ಭಾರತಕ್ಕೆ ಬಂದ ಮೊದಲ ತೈಲ ಹಡಗು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 1ರಂದು ಸೌದಿ ಅರೇಬಿಯಾದ ರಾಸ್ ತನುರಾ ಬಂದರಿನಿಂದ ಸುಮಾರು 1,35,335 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಈ ಹಡಗು ಭಾರತದತ್ತ ಪ್ರಯಾಣ ಆರಂಭಿಸಿತ್ತು. ಇದೇ ವೇಳೆ ಅಮೆರಿಕ ಹಾಗೂ ಇಸ್ರೇಲ್ ದಾಳಿಗಳಿಗೆ ಪ್ರತಿಯಾಗಿ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದ ಹಡಗು ಕೆಲಕಾಲ ಸಮುದ್ರದಲ್ಲೇ ನಿಂತಿತ್ತು.
ಇದನ್ನೂ ಓದಿ:
ಸಮುದ್ರ ದತ್ತಾಂಶ ಸಂಸ್ಥೆಗಳ ಪ್ರಕಾರ ಅಪಾಯದ ಪರಿಸ್ಥಿತಿಯಲ್ಲಿ ಪತ್ತೆಯಾಗದಂತೆ ಹಡಗಿನ ಟ್ರಾನ್ಸ್‌ಪಾಂಡರ್ ಹಾಗೂ ಸ್ವಯಂಚಾಲಿತ ಗುರುತಿನ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಸುರಕ್ಷಿತ ಮಾರ್ಗ ತಲುಪಿದ ಬಳಿಕ ಮತ್ತೆ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ಹಡಗು ಕಾಣಿಸಿಕೊಂಡಿತು.
ಮುಂಬೈ ಬಂದರು ತಲುಪಿದ ಬಳಿಕ ಹಡಗಿನಿಂದ ತೈಲವನ್ನು ಇಳಿಸುವ ಪ್ರಕ್ರಿಯೆ ಆರಂಭವಾಗಿದೆ. ಪೂರ್ವ ಮುಂಬೈನ ಮಹುಲ್ ಸಂಸ್ಕರಣಾಗಾರಗಳಿಗೆ ಸಾಗಿಸಲು ಸುಮಾರು 36 ಗಂಟೆಗಳು ಬೇಕಾಗುತ್ತದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನಲ್ಲಿ ಭಾರತೀಯರು ಸೇರಿದಂತೆ ವಿವಿಧ ದೇಶಗಳ 29 ಮಂದಿ ಸಿಬ್ಬಂದಿ ಇದ್ದರು ಎಂದು ಮಾಹಿತಿ ಲಭ್ಯವಾಗಿದೆ.



