ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಆರ್ಥಿಕ ಚಲನವಲನದಲ್ಲಿ ಅಬಕಾರಿ ಆದಾಯ ಪ್ರಮುಖ ಪಾತ್ರ ವಹಿಸುತ್ತಿರುವ ಈ ಹೊತ್ತಿನಲ್ಲಿ, ಕಳೆದ ಏಳು ತಿಂಗಳಿಂದ ಮದ್ಯ ಮಾರಾಟದಲ್ಲಿ ಕಂಡುಬಂದಿರುವ ಹಠಾತ್ ಕುಸಿತ ಸರ್ಕಾರದ ನಿದ್ದೆಗೆಡಿಸಿದೆ. ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಅಬಕಾರಿ ಆದಾಯವೇ ದೊಡ್ಡ ಆಧಾರವಾಗಿರುವುದರಿಂದ, ಈ ‘ಸೈಲೆಂಟ್ ಸ್ಲೋಡೌನ್’ ಈಗ ಹಣಕಾಸು ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಏಪ್ರಿಲ್‌ನಿಂದ ನವೆಂಬರ್‌ವರೆಗಿನ ಅವಧಿಯಲ್ಲಿ ಭಾರತೀಯ ತಯಾರಿಕೆಯ ವಿದೇಶಿ ಮದ್ಯ ಮತ್ತು ಬಿಯರ್ ಎರಡೂ ವಿಭಾಗಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಾರಾಟವಾಗಿಲ್ಲ ಎಂಬುದು ಇಲಾಖೆಯ ಅಂಕಿ-ಅಂಶಗಳಿಂದಲೇ ಸ್ಪಷ್ಟವಾಗಿದೆ.
ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಐಎಂಎಲ್ ಮಾರಾಟದಲ್ಲಿ ಲಕ್ಷಾಂತರ ಬಾಕ್ಸ್‌ಗಳಷ್ಟು ಇಳಿಕೆ ಕಂಡುಬಂದಿದ್ದರೆ, ಬಿಯರ್ ಮಾರಾಟದಲ್ಲಿ ಇದಕ್ಕಿಂತಲೂ ಹೆಚ್ಚು ಪ್ರಮಾಣದ ಕುಸಿತ ದಾಖಲಾಗಿದೆ. ಬೇಸಿಗೆ, ಹಬ್ಬ ಹಾಗೂ ಮಳೆಗಾಲದಂತಹ ಮಾರುಕಟ್ಟೆಗೆ ಅನುಕೂಲಕರ ಸಮಯದಲ್ಲಿಯೂ ಈ ಸ್ಥಿತಿ ಮುಂದುವರಿದಿರುವುದು ಇಲಾಖೆಗೆ ತಲೆನೋವಾಗುತ್ತಿದೆ.
ಬೆಲೆ ಏರಿಕೆಯ ಪರಿಣಾಮ, ಗ್ರಾಹಕರ ಖರೀದಿ ಸಾಮರ್ಥ್ಯದ ಕುಗ್ಗಿದೆ, ಹಣದುಬ್ಬರದ ಒತ್ತಡ ಹಾಗೂ ಅಕ್ರಮ ಮದ್ಯದ ಬಳಕೆ ಹೆಚ್ಚಿರುವ ಶಂಕೆ ಈ ಅಂಶಗಳೇ ಮಾರಾಟಕ್ಕೆ ಪೆಟ್ಟುಕೊಟ್ಟಿರಬಹುದು ಎಂಬ ವಿಶ್ಲೇಷಣೆ ನಡೆಯುತ್ತಿದೆ. ಒಟ್ಟಿನಲ್ಲಿ, ರಾಜ್ಯದ ಬೊಕ್ಕಸಕ್ಕೆ ದೊಡ್ಡ ಪಾಲು ನೀಡುತ್ತಿದ್ದ ಅಬಕಾರಿ ಕ್ಷೇತ್ರದ ಈ ಡಲ್ ಪ್ರದರ್ಶನ ಸರ್ಕಾರದ ಮುಂದಿನ ಆರ್ಥಿಕ ಯೋಜನೆಗಳಿಗೆ ಗಂಭೀರ ಸವಾಲಾಗಿ ಪರಿಣಮಿಸಿದೆ.

