ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಾದ್ಯಂತ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳದ ಘಟನೆಗಳು ಆತಂಕ ಹುಟ್ಟಿಸುತ್ತಿವೆ. ಅಂತಹುದೇ ಘಟನೆಯೊಂದು ಗುಜರಾತ್‌ನ ಜಾಮ್ನಗರದಲ್ಲಿ ನಡೆದಿದೆ. ವೃದ್ಧನೊಬ್ಬ ರಸ್ತೆಯ ಬದಿಯಲ್ಲಿ ನಿಂತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಈ ಅಸಭ್ಯ ಕೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಆ ಪ್ರದೇಶದಲ್ಲಿ ಆಟವಾಡುತ್ತಿದ್ದ ಕೆಲವು ಮಕ್ಕಳನ್ನು ವೃದ್ಧನೊಬ್ಬ ಕರೆದು ಮಾತನಾಡಿಸಲು ಪ್ರಾರಂಭಿಸಿದ. ಬಳಿಕ ಬಾಲಕಿಯೊಬ್ಬಳಿಗೆ ಮುತ್ತು ಕೊಟ್ಟು, ಆಕೆಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಈ ಇಡೀ ಘಟನೆ ಹತ್ತಿರದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ದೃಶ್ಯಾವಳಿಯಲ್ಲಿ ಆ ವ್ಯಕ್ತಿ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಸ್ಪಷ್ಟವಾಗಿ ಕಾಣಸಿಗುತ್ತದೆ. ಇದನ್ನು ಗಮನಿಸಿದ ಮತ್ತೊಂದು ಮಗು ತಕ್ಷಣ ಬಾಲಕಿಯನ್ನು ದೂರ ಎಳೆಯಲು ಪ್ರಯತ್ನಿಸಿದ್ದು, ನಂತರ ಸ್ಥಳೀಯ ಯುವಕನೊಬ್ಬ ಮಧ್ಯಪ್ರವೇಶಿಸಿ ವೃದ್ಧನಿಂದ ಬಾಲಕಿಯನ್ನು ರಕ್ಷಿಸಿದ್ದಾನೆ. ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ಕುರಿತ ವಿಡಿಯೋವನ್ನು ಆಧರಿಸಿ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಆರೋಪಿಯ ಗುರುತು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರು ಇಂತಹ ಕೃತ್ಯಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

