ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಅಮೆರಿಕಾ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ದಗೊನೆಗೊಳಿಸಲು ಶಾಂತಿ ಒಪ್ಪಂದ ಮಾತುಕತೆ ನಡೆಸುತ್ತಿದೆ, ಇನ್ನೊಂದೆಡೆ ಉಭಯ ದೇಶಗಳು ನಾವು ಯಾರಿಗೂ ಕಮ್ಮಿಇಲ್ಲ ಎಂಬಂತೆ ರಣರಂಗದಲ್ಲಿ ಯುದ್ದ ಮಾಡುತ್ತಲೇ ಇದೆ.
ಇದರ ಮುಂದುವರೆದ ಭಾಗವಾಗಿ ಉಕ್ರೇನ್ ಈಗ ತನ್ನ ಗಡಿಯಿಂದ ಸುಮಾರು 1,250 ಮೈಲಿ ದೂರದಲ್ಲಿರುವ ಮೆಡಿಟರೇನಿಯನ್ ಸಮುದ್ರದ ಲಿಬಿಯಾದ ಕರಾವಳಿ ಪ್ರದೇಶದಲ್ಲಿ ರಷ್ಯಾದ ನೆರಳು ಟ್ಯಾಂಕರ್ ಮೇಲೆ ದಾಳಿ ನಡೆಸಿದೆ.
ಈ ದಾಳಿ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಹತ್ವದ ತಿರುವು ನೀಡಿದ್ದು, ಸುಮಾರು ನಾಲ್ಕು ವರ್ಷಗಳ ನಂತರ ಮೆಡಿಟರೇನಿಯನ್‌ನಲ್ಲಿ ನಡೆದ ಮೊದಲ ಇಂತಹ ದಾಳಿಯಾಗಿದೆ.ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್‌ನ ಇಂತಹ ದಾಳಿಗಳಿಗೆ ರಷ್ಯಾ ಪ್ರತಿಕಾರ ತೀರಿಸಿಕೊಳ್ಳಲಿದೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಉಕ್ರೇನ್‌ನ ಭದ್ರತಾ ಸೇವೆ ಮೂಲಗಳ ಪ್ರಕಾರ, ಈ ದಾಳಿ ಒಂದು ಹೊಸ, ಅಭೂತಪೂರ್ವ ವಿಶೇಷ ಕಾರ್ಯಾಚರಣೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆದರೆ, ಡ್ರೋನ್‌ಗಳನ್ನು ಹೇಗೆ ನಿಯೋಜಿಸಲಾಯಿತು, ಎಲ್ಲಿಂದ ಉಡಾಯಿಸಲಾಯಿತು, ಯಾವ ದೇಶಗಳ ಮೇಲೆ ಹಾರಾಟ ನಡೆಸಲಾಯಿತು ಎಂಬಂತಹ ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ. ದಾಳಿಗೆ ಒಳಗಾದ ಟ್ಯಾಂಕರ್ ಖಾಲಿಯಾಗಿದ್ದು, ಯಾವುದೇ ಪರಿಸರ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಟಿನ್ ಉಕ್ರೇನ್‌ನ ಈ ದಾಳಿಗಳ ಬಗ್ಗೆ ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ. ನೇರವಾಗಿ ಮೆಡಿಟರೇನಿಯನ್ ಸಮುದ್ರದಲ್ಲಿ ನಡೆದ ದಾಳಿಗಳ ಬಗ್ಗೆ ಉಲ್ಲೇಖಿಸದಿದ್ದರೂ, ಇತ್ತೀಚಿನ ದಾಳಿಗೆ ನಾವು ಖಂಡಿತವಾಗಿಯೂ ಪ್ರತಿಕ್ರಿಯಿಸಲಿದ್ದೇವೆ. ಇನ್ನು, ಈ ದಾಳಿಗಳಿಂದ ಯಾವುದೇ ಪೂರೈಕೆಯನ್ನು ಅಡ್ಡಿಪಡಿಸಲು ಸಾಧ್ಯವಿಲ್ಲ, ಆದರೆ ಹೆಚ್ಚುವರಿ ಬೆದರಿಕೆಗಳನ್ನು ಮಾತ್ರ ಸೃಷ್ಟಿಸಲಿದೆ. ಆದರೆ ಅಂತಿಮವಾಗಿ ಯಾವುದೇ ಫಲಿತಾಂಶವನ್ನು ಅವರು ಕಾಣುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಏನಿದು ನೆರಳು ಟ್ಯಾಂಕರ್?
ನೆರಳು ಟ್ಯಾಂಕರ್ ಅಥವಾ ‘ಶ್ಯಾಡೋ’ ಫ್ಲೀಟ್ʼ ಎಂದರೆ ರಷ್ಯಾ, ಇರಾನ್ ಮತ್ತು ವೆನೆಜುವೆಲಾ ದೇಶಗಳು ಆರ್ಥಿಕ ನಿರ್ಬಂಧಗಳನ್ನು ತಪ್ಪಿಸಲು ಬಳಸುವ ಹಡಗುಗಳ ಸಮೂಹ. ಈ ಹಡಗುಗಳು ತಮ್ಮ ನೋಂದಣಿ, ಮಾಲೀಕತ್ವ ಮತ್ತು ಧ್ವಜವನ್ನು ಪದೇ ಪದೇ ಬದಲಿಸಿಕೊಳ್ಳುತ್ತವೆ. ಇದರಿಂದಾಗಿ ಅವುಗಳ ಮೂಲ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ರಷ್ಯಾ ತನ್ನ ಕಚ್ಚಾ ತೈಲ ರಫ್ತು ಮುಂದುವರಿಸಲು ಮತ್ತು ಯುದ್ಧಕ್ಕೆ ಹಣಕಾಸು ಒದಗಿಸಲು ಈ ‘ಶ್ಯಾಡೋ’ ಫ್ಲೀಟ್ ಅನ್ನು ಬಳಸಿಕೊಳ್ಳುತ್ತಿದೆ. ಉಕ್ರೇನ್ ಈ ಆದಾಯದ ಮೂಲವನ್ನು ಕಡಿತಗೊಳಿಸಲು ಈ ಹಡಗುಗಳ ಮೇಲೆ ದಾಳಿ ನಡೆಸುತ್ತಿದೆ.ಈವರೆಗೂ ರಷ್ಯಾದ ‘ಶ್ಯಾಡೋ’ ಫ್ಲೀಟ್‌ನಲ್ಲಿ 1,000 ಕ್ಕೂ ಹೆಚ್ಚು ಹಡಗುಗಳಿವೆ ಎಂದು ಅಂದಾಜಿಸಲಾಗಿದೆ.

