Tuesday, December 30, 2025

ಮದ್ಯಪಾನ‌ ಮಾಡಿ ವಾಹನ ಚಾಲನೆ: ಮಡಿಕೇರಿಯಲ್ಲಿ ಓರ್ವನ ಬಂಧನ

ಹೊಸ ದಿಗಂತ ವರದಿ,ಮಡಿಕೇರಿ:

ಮದ್ಯಪಾನ‌ ಮಾಡಿ ವಾಹನ ಚಲಾಯಿಸುವುದರೊಂದಿಗೆ ಮೂರು ವಾಹನಗಳಿಗೆ ಜಖಂಪಡಿಸಿದ ಆರೋಪದಡಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬೋಯಿಕೇರಿ ಗ್ರಾಮದ ಆರೋಪಿ ಅಕ್ಷಯ್ ಕುಕುಮಾರ್ (26) ಬಂಧಿತ ಆರೋಪಿ.

ಶನಿವಾರ (ಡಿ.27) ರಾತ್ರಿ ಸುಮಾರು 10.20 ಘಂಟೆ ಸಮಯದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನಿವಳವಾಡಿ ಗ್ರಾಮದ ಹೆದ್ದಾರಿಯಲ್ಲಿ ಆರೋಪಿಯು ಅತೀವೇಗ ಮತ್ತು ಅಜಾಗೂಕತೆಯಿಂದ ಜೀಪನ್ನು ಚಲಾಯಿಸಿ ಅಪಘಾತಪಡಿಸಿ ಮೂರು ವಾಹನಗಳು ಜಖಂಗೊಳಿಸಿರುವುದಾಗಿ ಹೇಳಲಾಗಿದೆ.

ಅಪಘಾತಪಡಿಸಿದ ಕೆಎ 23 ಎಂ 5928 ರ ಜೀಪ್‌ ಚಾಲಕನಾದ ಅಕ್ಷಯ್ ಕುಮಾ‌ರ್ ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 281, 125 (ಎ) 110 ಬಿ.ಎನ್.ಎಸ್ ಆಕ್ಟ್ & 187 ಐಎಂವಿ ಆಕ್ಟ್
ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಹೊಸ ವರ್ಷ ಆಚರಣೆಯ ಸಂದರ್ಭ ವಾಹನ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತ ಪಡಿಸಿದ್ದಲ್ಲಿ ಕೊಲೆಯಲ್ಲದ ಅಪರಾಧಿಕ ನರಹತ್ಯೆ (Culpable Homicide)ಯನ್ನು ಮಾಡುವ ವ್ಯಕ್ತಿಗೆ ಕನಿಷ್ಟ 3 ವರ್ಷಬಅಥವಾ ಗರಿಷ್ಠ 7 ವರ್ಷ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.

ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಮಾಲಕರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮತ್ತು ವಾಹನ ಪರವಾನಗಿ ಹೊಂದಿಲ್ಲದವರಿಗೆ ವಾಹನ ಚಲಾಯಿಸಲು ಅಸ್ಪದ ನೀಡಬಾರದು. ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವುದು ಕಂಡುಬಂದಲ್ಲಿ ವಾಹನ ಮಾಲಕರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುವುದು ಅಥವಾ ಬೈಕ್/ಕಾರುಗಳನ್ನು ಚಲಾಯಿಸುತ್ತಾ ಯಾವುದೇ ರೀತಿಯ ಸ್ಟಂಟ್‌ಗಳನ್ನು ಮಾಡಿರುವ ಭಾವಚಿತ್ರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಗ್ಗೆ ಮಾಹಿತಿ ನೀಡಬೇಕು. ಮತ್ತು ರಸ್ತೆಯಲ್ಲಿ ಯಾವುದೇ ಅಪಘಾತಗಳು ಸಂಭವಿಸಿದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

error: Content is protected !!