Friday, January 2, 2026

ಒಂದೇ ನಗರ, ಎರಡು ನ್ಯಾಯ: ಕೋಗಿಲು ಲೇಔಟ್‌ಗೆ ಸಿಕ್ಕ ಆಸರೆ ಕೆ.ಜಿ. ಹಳ್ಳಿಗೇಕಿಲ್ಲ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ತೆರವು ಕಾರ್ಯಾಚರಣೆಗಳು ಬಡವರ ಬದುಕನ್ನು ಹೇಗೆ ಮೂರಾಬಟ್ಟೆ ಮಾಡುತ್ತವೆ ಎಂಬುದಕ್ಕೆ ಕೆ.ಜಿ. ಹಳ್ಳಿಯ ‘ಚುನಾ ಲೈನ್’ ನಿವಾಸಿಗಳ ಇಂದಿನ ಸ್ಥಿತಿಯೇ ಸಾಕ್ಷಿ. ಕಳೆದ ಅಕ್ಟೋಬರ್‌ನಲ್ಲಿ ರೈಲ್ವೆ ಇಲಾಖೆ ನಡೆಸಿದ ತೆರವು ಕಾರ್ಯಾಚರಣೆಯಿಂದಾಗಿ ಬೀದಿಗೆ ಬಿದ್ದಿರುವ ಸುಮಾರು 80ಕ್ಕೂ ಹೆಚ್ಚು ಕುಟುಂಬಗಳು, ಎರಡು ತಿಂಗಳು ಕಳೆದರೂ ಇಂದಿಗೂ ಪರ್ಯಾಯ ವ್ಯವಸ್ಥೆಯಿಲ್ಲದೆ ಅತಂತ್ರ ಸ್ಥಿತಿಯಲ್ಲಿವೆ.

ಸರ್ವೇ ನಂಬರ್ 71ಕ್ಕೆ ಸೇರಿದ ಈ ಜಾಗದಲ್ಲಿ ನಾವು ಕಳೆದ 150 ವರ್ಷಗಳಿಂದ ವಾಸವಿದ್ದೇವೆ ಎಂಬುದು ಸ್ಥಳೀಯರ ವಾದ. ಇದಕ್ಕೆ ಪೂರಕವಾಗಿ ದಶಕಗಳ ಹಳೆಯ ದಾಖಲೆಗಳು ಅವರ ಬಳಿಯಿವೆ. ವಿಶೇಷವೆಂದರೆ, 2016-17ರಲ್ಲಿ ಇದೇ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಬಿಬಿಎಂಪಿಯೇ ಧನಸಹಾಯ ನೀಡಿತ್ತು. ಆದರೆ ಇಂದು ಅದೇ ಸರ್ಕಾರಿ ವ್ಯವಸ್ಥೆ ಇವರನ್ನು ಅಕ್ರಮ ನಿವಾಸಿಗಳೆಂದು ಪರಿಗಣಿಸಿ ಬೀದಿಗೆ ತಳ್ಳಿರುವುದು ವಿಪರ್ಯಾಸ.

ಸಂತ್ರಸ್ತರ ಆಕ್ರೋಶಕ್ಕೆ ಮುಖ್ಯ ಕಾರಣ ಸರ್ಕಾರದ ತಾರತಮ್ಯ ನೀತಿ. ಕೋಗಿಲು ಲೇಔಟ್‌ನಲ್ಲಿ ಮನೆ ಕಳೆದುಕೊಂಡವರಿಗೆ ತಕ್ಷಣವೇ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಸರ್ಕಾರ, ಕೆ.ಜಿ. ಹಳ್ಳಿಯ ನಿವಾಸಿಗಳನ್ನು ಮಾತ್ರ ಮರೆತಿದೆ ಏಕೆ ಎಂಬುದು ಇವರ ಪ್ರಶ್ನೆ. ಸ್ಥಳೀಯ ಶಾಸಕ ಕೆ.ಜೆ. ಜಾರ್ಜ್ ಅವರು ಮನೆ ಕಲ್ಪಿಸುವ ಭರವಸೆ ನೀಡಿದ್ದರೂ, ಈವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ಸದ್ಯ ರೈಲ್ವೆ ಹಳಿಗಳ ಪಕ್ಕದಲ್ಲೇ ಪ್ಲಾಸ್ಟಿಕ್ ಶೀಟ್‌ಗಳ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡಿರುವ ಈ ಕುಟುಂಬಗಳು, ಕೊರೆಯುವ ಚಳಿ ಮತ್ತು ಅನಿರೀಕ್ಷಿತ ಮಳೆಯಲ್ಲಿ ನಡುಗುತ್ತಿವೆ. ವಯಸ್ಸಾದವರು ಮತ್ತು ಪುಟ್ಟ ಮಕ್ಕಳ ಸ್ಥಿತಿಯಂತೂ ಹೇಳತೀರದಾಗಿದೆ.

ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮಾನವೀಯ ನೆಲೆಯಲ್ಲಿ ನಮಗೆ ನ್ಯಾಯ ಒದಗಿಸಬೇಕು. ಕೇವಲ ಭರವಸೆಗಳು ಹೊಟ್ಟೆ ತುಂಬಿಸುವುದಿಲ್ಲ, ನಮಗೆ ಬೇಕಿರುವುದು ತಲೆಗೊಂದು ಸೂಲು ಎಂದು ನಿರಾಶ್ರಿತರು ಪಟ್ಟು ಹಿಡಿದಿದ್ದಾರೆ.

error: Content is protected !!