ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಕ್ರಿಕೆಟ್ ಪ್ರೇಮಿಗಳ ದಶಕದ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಬರೋಬ್ಬರಿ 11 ವರ್ಷಗಳ ಸುದೀರ್ಘ ಅಂತರದ ಬಳಿಕ ‘ಕರ್ನಾಟಕ ರಣಜಿ ತಂಡ’ ಭರ್ಜರಿಯಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಉತ್ತರಾಖಂಡ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ರಾಜ್ಯ ತಂಡ ಫೈನಲ್ ಪ್ರವೇಶಿಸಿದ್ದು, ಫೆಬ್ರವರಿ 24 ರಿಂದ ಹುಬ್ಬಳ್ಳಿಯ ಮೈದಾನದಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಪ್ರಶಸ್ತಿಗಾಗಿ ಹೋರಾಡಲಿದೆ.
ಸೆಮಿಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಅದೇ 15 ಸದಸ್ಯರ ಬಲಿಷ್ಠ ತಂಡವನ್ನೇ ಫೈನಲ್‌ಗೂ ಉಳಿಸಿಕೊಳ್ಳಲಾಗಿದೆ. ತಂಡದ ಸಮತೋಲನ ಅದ್ಭುತವಾಗಿದ್ದು, ಅನುಭವಿ ಹಾಗೂ ಯುವ ಆಟಗಾರರ ಮಿಶ್ರಣ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಿದೆ.
ಕರ್ನಾಟಕದ ಬ್ಯಾಟಿಂಗ್ ವಿಭಾಗ ಕಬ್ಬಿಣದ ಕಡಲೆಯಂತಿದೆ. ಅನುಭವಿ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ನಾಯಕ ದೇವದತ್ ಪಡಿಕ್ಕಲ್ ಕಣಕ್ಕಿಳಿಯಲಿದ್ದಾರೆ.
ಬ್ಯಾಟಿಂಗ್ ಮಾತ್ರವಲ್ಲದೆ, ಬೌಲಿಂಗ್‌ನಲ್ಲೂ ಕರ್ನಾಟಕ ‘ಫುಲ್ ಸ್ಟ್ರಾಂಗ್’ ಆಗಿದೆ. ವಿದ್ಯಾಧರ್ ಪಾಟೀಲ್ ಮತ್ತು ವೈಶಾಕ್ ವಿಜಯ್ ಕುಮಾರ್ ವೇಗದ ದಾಳಿ ನಡೆಸಿದರೆ, ಸ್ಪಿನ್ ಮ್ಯಾಜಿಕ್ ಮಾಡಲು ಶ್ರೇಯಸ್ ಗೋಪಾಲ್ ಸಜ್ಜಾಗಿದ್ದಾರೆ.
ಪ್ರಸಿದ್ಧ್ ಕೃಷ್ಣ, ಶಿಖರ್ ಶೆಟ್ಟಿ ಮತ್ತು ವಿದ್ವತ್ ಕಾವೇರಪ್ಪ ಅವರ ಸಂಘಟಿತ ದಾಳಿ ಉತ್ತರಾಖಂಡ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಇದೇ ಲಯ ಮುಂದುವರಿದರೆ ಕರ್ನಾಟಕ 9ನೇ ಬಾರಿಗೆ ರಣಜಿ ಟ್ರೋಫಿ ಎತ್ತಿ ಹಿಡಿಯುವುದು ನಿಶ್ಚಿತ.
ಕರ್ನಾಟಕ ಫೈನಲ್ ತಂಡ ಹೀಗಿದೆ:
ದೇವದತ್ ಪಡಿಕ್ಕಲ್ (ನಾಯಕ), ಮಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಕರುಣ್ ನಾಯರ್, ಕೆ.ವಿ ಅನೀಶ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೆ.ಎಲ್ ಶ್ರೀಜಿತ್, ವಿಜಯಕುಮಾರ್ ವೈಶಾಕ್.



