Thursday, December 18, 2025

ಸೆಂಚುರಿಗೆ ಮೂರು ಬಾಕಿಯಿತ್ತಷ್ಟೇ! ಪೊಲೀಸರ ಕೈಗೆ ಸಿಕ್ಕಿಬಿದ್ದ ಖತರ್ನಾಕ್‌ ಕಳ್ಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಕನಾಗಿದ್ದಾಗಿನಿಂದ ಕಳ್ಳತನಕ್ಕೆ ಇಳಿದಿದ್ದ ಖತರ್ನಾಕ್‌ ಕಳ್ಳನೊಬ್ಬ ತನ್ನ 97ನೇ ಕಳ್ಳತನದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ರಾಹುಲ್ ಕುಮಾರ್ ಶರ್ಮಾ ಅಲಿಯಾಸ್ ಭರತ್ ಕುಮಾರ್ ಅರೆಸ್ಟ್‌ ಆದ ಆರೋಪಿ. ಈತ ಮೂಲತಃ ತೆಲಂಗಾಣದ ಹೈದರಾಬಾದ್ ನಿವಾಸಿ. ರಾಹುಲ್ ತಾನು 14 ವರ್ಷದಲ್ಲೇ ಮನೆ ಕಳ್ಳತನ ಮಾಡಿ ಜೈಲು ಪಾಲಾಗಿದ್ದ. ಬುದ್ಧಿ ಕಲಿಯದೆ ಮನೆ ಕಳ್ಳತನ ಮಾಡುವುದು ಮೋಜಿ, ಮಸ್ತಿ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ.

ತೆಲಂಗಾಣ, ಆಂಧ್ರದಲ್ಲಿ ಬರೋಬ್ಬರಿ 96 ಮನೆಗಳ್ಳತನ ಮಾಡಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಈಗ 97ನೇ ಬಾರಿಗೆ ಚಿಕ್ಕಬಳ್ಳಾಪುರದ ಬಳಿ ಅಣಕನೂರು ಗ್ರಾಮದಲ್ಲಿ ಮನೆಗಳ್ಳತನ ಮಾಡಿ ಚಿಕ್ಕಬಳ್ಳಾಪುರ ಪೊಲೀಸರ ಅತಿಥಿಯಾಗಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಸಂತೋಷ್​ ನಗರಕ್ಕೆ ಅಲ್ಲಾ ಭಕಾಶ್ ಎನ್ನುವ ಸ್ನೇಹಿತನನ್ನು ನೋಡಲು ಚಿಕ್ಕಬಳ್ಳಾಪುರಕ್ಕೆ ರಾಹುಲ್ ಆಗಮಿಸಿದ್ದ. ವಾಪಸ್​ ಮರಳುವಾಗ ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರಿನಲ್ಲಿ ನಾಗರಾಜ್ ಎ.ಎಂ ಎನ್ನುವವರ ಮನೆಗೆ ಕನ್ನ ಹಾಕಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದ. ನವೆಂಬರ್ 27ರಂದು ಘಟನೆ ನಡೆದಿತ್ತು.

ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲಿಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದು, ರಾಹುಲ್ ಕಳ್ಳತನ ಮಾಡಿದ್ದು ಗೊತ್ತಾಗಿದೆ. ರಾಹುಲ್​​ಗೆ ಆತನ ಸ್ನೇಹಿತ ಅಲ್ಲಾ ಭಕಾಶ್ ಹಾಗೂ ಆಂಧ್ರದ ಸೈಯದ್ ದಾವೂದ್ ಸಾಥ್ ನೀಡಿದ್ದು ಗೊತ್ತಾಗಿದೆ. ಇದರಿಂದ ಪೊಲೀಸರು ಮೂವರನ್ನು ಬಂಧಿಸಿ ಮತ್ತೆ ಜೈಲಿಗೆ ಕಳುಹಿಸಿದ್ದಾರೆ.

error: Content is protected !!