Friday, November 28, 2025

ಛತ್ತೀಸ್​ಗಢದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ: ಐಇಡಿ ಸ್ಫೋಟ, ಮಹಿಳಾ ಕಾನ್ಸ್​ಸ್ಟೆಬಲ್‌ಗೆ​ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಕ್ಸಲರು ಹುದುಗಿಸಿಟ್ಟ ಸುಧಾರಿತ ಕಚ್ಚಾ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ವೊಬ್ಬರು ಗಾಯಗೊಂಡಿರುವ ಘಟನೆ ಇಂದು ಛತ್ತೀಸ್​ಗಢ ನ ಸುಕ್ಮಾ ಜಿಲ್ಲೆಯಲ್ಲಿ ನಡೆಯಿತು.

ಕೇರಳಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಗೋಗುಂಡ ಭದ್ರತಾ ಶಿಬಿರದಿಂದ ರಾಜ್ಯ ಪೊಲೀಸರ ಎರಡು ಘಟಕಗಳಾದ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ಜಿಲ್ಲಾ ಪಡೆಗಳ ತಂಡವು ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಹೊರಟಿದ್ದಾಗ ಈ ಘಟನೆ ಸಂಭವಿಸಿದೆ. ಮಧ್ಯಾಹ್ನ ಸುಮಾರು 1 ಗಂಟೆಗೆ ಅರಣ್ಯ ಪ್ರದೇಶದಿಂದ ಕೂಡಿದ ಬೆಟ್ಟದಲ್ಲಿ ಐಇಡಿ ಬಾಂಬ್​ ಸ್ಫೋಟಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯ ಸಂದರ್ಭದಲ್ಲಿ ಜಿಲ್ಲಾ ಪಡೆಯ ಕಾನ್‌ಸ್ಟೆಬಲ್ ಮುಚಕಿ ದುರ್ಗಾ ಎಂಬವರು ಆಕಸ್ಮಿಕವಾಗಿ ಐಇಡಿ ಮೇಲೆ ಕಾಲಿಟ್ಟಿದ್ದು, ಒತ್ತಡದ ಪರಿಣಾಮವಾಗಿ ಅದು ಸ್ಫೋಟಗೊಂಡಿದೆ. ಪರಿಣಾಮ ಅವರ ಎಡಗಾಲಿಗೆ ಗಾಯವಾಗಿದೆ ಎಂದು ಮಾಹಿತಿ ನೀಡಿದರು.

ತಕ್ಷಣವೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ರಾಯ್‌ಪುರಕ್ಕೆ ವಿಮಾನದ ಮೂಲಕ ಕರೆದೊಯ್ಯಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.

error: Content is protected !!