ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಖಾಲ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ವಿರುದ್ಧ ನಡೆಸುತ್ತಿರುವ ಆಪರೇಷನ್ ಅಖಾಲ್ ಮೂರನೇ ದಿನಕ್ಕೂ ಮುಂದುವರಿದಿದ್ದು, ಭಾನುವಾರ ಕೂಡ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ಎನ್‌ಕೌಂಟರ್‌ನಲ್ಲಿ ಓರ್ವ ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭದ್ರತಾ ಪಡೆಗಳಿಗೆ ದೊರಕಿದ ಖಚಿತ ಗುಪ್ತಚರ ಮಾಹಿತಿ ಮೇರೆಗೆ ಶುಕ್ರವಾರ ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭವಾಗಿದ್ದು, ಅರಣ್ಯದ ಒಳಭಾಗದಲ್ಲಿ ಅಡಗಿಕೊಂಡಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದರಿಂದ ಯುದ್ಧ ಪರಿಸ್ಥಿತಿ ನಿರ್ಮಾಣವಾಯಿತು. ಶುಕ್ರವಾರ ರಾತ್ರಿಯಿಂದ ಆರಂಭವಾದ ಕಾರ್ಯಾಚರಣೆ ಶನಿವಾರ ಕೂಡ ಮುಂದುವರಿದಿದ್ದು, ಆ ದಿನ ಮೂವರು ಉಗ್ರರನ್ನು ನಿಗ್ರಹಿಸಲಾಗಿತ್ತು. ಭಾನುವಾರ ಮತ್ತೆ ಮೂರು ಭಯೋತ್ಪಾದಕರು ಎನ್‌ಕೌಂಟರ್‌ನಲ್ಲಿ ಸಾವಿಗೀಡಾಗಿದ್ದಾರೆ.
ಘಟನೆಯು ನಡೆದ ಅಖಾಲ್ ಅರಣ್ಯ ಪ್ರದೇಶದಲ್ಲಿ ಶನಿವಾರದಿಂದಲೇ ಸ್ಫೋಟದ ಶಬ್ದಗಳು ಮತ್ತು ಗುಂಡಿನ ಚಕಮಕಿ ಕೇಳಿಬರುತ್ತಿದ್ದು, ಪೊಲೀಸರು, ಸೇನೆ ಹಾಗೂ ಸಿಆರ್‌ಪಿಎಫ್ ಪಡೆಗಳು ಜಂಟಿಯಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಇನ್ನೂ ಎನ್‌ಕೌಂಟರ್ ಮುಂದುವರೆದಿರುವ ಮಾಹಿತಿ ಲಭ್ಯವಾಗಿದೆ.
ಶನಿವಾರ ನಿಗ್ರಹಿಸಲಾದ ಉಗ್ರರು ಲಷ್ಕರ್-ಎ-ತೊಯ್ಬಾ ಸಂಘಟನೆಯ ಶಾಖೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಗೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಘಟನೆ ಹಿಂದೆಯೂ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದು, 26 ನಾಗರಿಕರ ಸಾವಿಗೆ ಕಾರಣವಾಗಿತ್ತು.
ಪ್ರಸ್ತುತ, ಅಖಾಲ್ ಅರಣ್ಯ ಪ್ರದೇಶದಲ್ಲಿ ಎನ್‌ಕೌಂಟರ್ ಇನ್ನೂ ಮುಂದುವರಿದಿದ್ದು, ಸೇನೆ ಶೋಧ ಕಾರ್ಯಾಚರಣೆಯೊಂದಿಗೆ ಕಟ್ಟೆಚ್ಚರ ವಹಿಸಿದೆ.