February 6, 2026
Friday, February 6, 2026
spot_img

‘ಆಪರೇಷನ್ ಸಾಗರ್ ಬಂಧು’…ಶ್ರೀಲಂಕಾದಿಂದ ವಿವಿಧ ದೇಶಗಳ ಜನರನ್ನು ರಕ್ಷಿಸಿದ ಭಾರತೀಯ ವಾಯುಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿತ್ವಾ ಚಂಡಮಾರುತ ಅಬ್ಬರಕ್ಕೆ ಶ್ರೀಲಂಕಾ ಅಕ್ಷರಶಃ ನಲುಗಿ ಹೋಗಿದೆ. ಈ ಭೀಕರ ಸೈಕ್ಲೋನ್​ಗೆ ಬಲಿಯಾದವರ ಸಂಖ್ಯೆ 200 ದಾಟಿದೆ. ಸುಮಾರು 200-250 ಮಂದಿ ಕಾಣೆಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಭಾರೀ ಮಳೆ, ಗಾಳಿ, ಪ್ರವಾಹ, ಭೂಕುಸಿತಗಳು ಸಂಭವಿಸುತ್ತಲೇ ಇದ್ದು, ಲಕ್ಷಾಂತರ ಮನೆಗಳು ಮತ್ತು ಕುಟುಂಬಗಳು ಬಾಧಿಗೊಂಡಿವೆ. ಶ್ರೀಲಂಕಾ ಸರ್ಕಾರವು ರಾಷ್ಟ್ರೀಯ ತುರ್ತುಸ್ಥಿತಿ ಎಂದು ಘೋಷಿಸಿ, ಸಕಲ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಂಡಿದೆ. ಶ್ರೀಲಂಕಾಗೆ ಭಾರತವೂ ಕೂಡ ನೆರವಿನ ಹಸ್ತ ಚಾಚಿದೆ. ರಕ್ಷಣಾ ಕಾರ್ಯದಲ್ಲಿ ಭಾರತೀಯ ವಾಯುಪಡೆಯೂ ಕೈಜೋಡಿಸಿದೆ.

ಭಾರತೀಯ ವಾಯುಪಡೆಯು ‘ಆಪರೇಷನ್ ಸಾಗರ್ ಬಂಧು’ ಕಾರ್ಯಾಚರಣೆ ನಡೆಸಿ ಎಂಐ-17 ಹೆಲಿಕಾಪ್ಟರ್​ಗಳನ್ನು ನಿಯೋಜಿಸಿದೆ. ಪ್ರವಾಹದಲ್ಲಿ ಸಿಲುಕಿದ್ದ ಹಲವು ಜನರನ್ನು ಈ ಆಪರೇಷನ್​ನಲ್ಲಿ ರಕ್ಷಿಸಲಾಗಿದೆ.

ಜರ್ಮನಿ, ಸೌತ್ ಆಫ್ರಿಕಾ, ಸ್ಲೊವೇನಿಯಾ, ಯುಕೆ, ಪಾಕಿಸ್ತಾನ, ಬೆಲಾರಸ್, ಆಸ್ಟ್ರೇಲಿಯಾ, ಇರಾನ್, ಬಾಂಗ್ಲಾದೇಶ, ಪೋಲ್ಯಾಂಡ್ ಮೊದಲಾದ ದೇಶಗಳ ಪ್ರಜೆಗಳನ್ನು ಭಾರತೀಯ ವಾಯುಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ಕೊಲಂಬೋ ಏರ್​ಪೋರ್ಟ್​ನಲ್ಲಿದ್ದ ಭಾರತೀಯ ವಾಯುಪಡೆಯ ಎರಡು ವಿಮಾನಗಳು, ತಿರುವನಂತಪುರಂಗೆ 247 ಪ್ರಯಾಣಿಕರೊಂದಿಗೆ IL 76 ಮತ್ತು ದೆಹಲಿ (ಹಿಂಡನ್) ಗೆ 76 ಪ್ರಯಾಣಿಕರೊಂದಿಗೆ C 130 J, ಕೊಲಂಬೊದಿಂದ ಹೊರಟಿವೆ. ವಾಣಿಜ್ಯ ವಿಮಾನಯಾನ ಸಂಸ್ಥೆಗಳ ಮೂಲಕ ಸಿಕ್ಕಿಬಿದ್ದ ಪ್ರಯಾಣಿಕರನ್ನು ಮತ್ತಷ್ಟು ಸ್ಥಳಾಂತರಿಸುವ ಕಾರ್ಯವೂ ನಡೆಯುತ್ತಿದೆ.

ಶ್ರೀಲಂಕಾದಲ್ಲಿ ಭಾರತವು ಸಿಲುಕಿರುವ ಭಾರತೀಯ ಪ್ರಯಾಣಿಕರಿಗೆ ಎಲ್ಲಾ ಸಹಾಯವನ್ನು ಒದಗಿಸುತ್ತಿದೆ ಮತ್ತು ಅವರ ತ್ವರಿತ ಪ್ರಯಾಣವನ್ನು ಸುಗಮಗೊಳಿಸುತ್ತಿದೆ. ಶ್ರೀಲಂಕಾದಲ್ಲಿ ಸಿಲುಕಿರುವ ಯಾವುದೇ ಭಾರತೀಯ ಪ್ರಯಾಣಿಕರು ತುರ್ತು ಸಹಾಯ ಕೇಂದ್ರ ಸಂಖ್ಯೆ: +94 773727832 ಅನ್ನು ಸಂಪರ್ಕಿಸಬಹುದು ಅಥವಾ ಕೊಲಂಬೊದ ಬಂಡರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ಏರ್‌ಲೈನ್ ಕೌಂಟರ್‌ಗಳನ್ನು ಸಂಪರ್ಕಿಸಬಹುದು.” ಎಂದು ಶ್ರೀಲಂಕಾದ ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !