ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ ಕಾರ್ಯಾಚರಣೆಯ ಮೂಲಕ ಉಗ್ರರನ್ನು ಬೆಂಬಲಿಸುವವರನ್ನು ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ನೀಡಿದೆ ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಡ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಉದ್ದೇಶಿಸಿ ಮಾತನಾಡಿದ ಅವರು ಪಹಲ್ಗಾಮ್ ಉಗ್ರ ದಾಳಿಗೆ ಆಪರೇಷನ್ ಸಿಂದೂರ ಪ್ರತಿಕ್ರಿಯೆಯಾಗಿತ್ತು. ಈ ಸಲ ಭಾರತದ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಉಗ್ರರ ಬೆಂಬಲಿಗರಿಗೆ ತೋರಿಸಿದೆ ಎಂದಿದ್ದಾರೆ.
ದೇಶದ ಜನತೆ ತೋರಿಸಿದ ನಂಬಿಕೆ ಮತ್ತು ಸರ್ಕಾರ ನೀಡಿದ ಮುಕ್ತ ಸ್ವಾತಂತ್ರ್ಯದಿಂದ ಭಾರತೀಯ ಸೇನೆ ತಕ್ಕ ಪ್ರತಿಕ್ರಿಯೆ ನೀಡಿತು. ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಪ್ರಶ್ನಿಸಲು ಅಥವಾ ಜನರಿಗೆ ಹಾನಿ ಮಾಡಲು ಪ್ರಯತ್ನಿಸುವ ಯಾವುದೇ ಶಕ್ತಿಗೆ ಸೂಕ್ತವಾದ ಉತ್ತರವನ್ನೇ ನೀಡಲಾಗುತ್ತದೆ. ಇದು ಭಾರತದ ಹೊಸ ನೀತಿಯಾಗಿದೆ ಎಂದು ಹೇಳಿದ್ದಾರೆ.
ಸೇನೆಯು ಅಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದಲ್ಲಿ 9ಕ್ಕೂ ಹೆಚ್ಚಿನ ಭಯೋತ್ಪಾದಕರ ಅಡಗುದಾಣಗಳನ್ನು ನಾಶಪಡಿಸಿತು. ಪಾಕಿಸ್ತಾನದ ಪ್ರತಿದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತು. ಕೊನೆಗೆ ಭಾರತ ಶಾಂತಿಗೂ ಅವಕಾಶ ನೀಡಿತು, ಆದರೆ ಪಾಕಿಸ್ತಾನ ಹೇಡಿತನಕ್ಕೆ ಮೊರೆ ಹೋಯಿತು ಎಂದು ಎಂದರು.