ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣವಾದ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆ ಇದೀಗ ಗಂಭೀರ ಹಂತಕ್ಕೆ ತಲುಪಿದೆ. ಇತ್ತೀಚೆಗೆ ನಡೆದ ಮಾನವ-ಆನೆ ಸಂಘರ್ಷದ ಬಳಿಕ ಅರಣ್ಯ ಇಲಾಖೆ ಪುಂಡಾನೆಯನ್ನು ಸೆರೆಹಿಡಿಯಲು ಕ್ರಮಕೈಗೊಂಡಿದ್ದು, ಕೊಡಗು ಭಾಗದಿಂದ ಕುಮ್ಕಿ ಆನೆಗಳ ವಿಶೇಷ ತಂಡವನ್ನು ಭೈರಾಪುರಕ್ಕೆ ಕರೆತರಲಾಗಿದೆ.
ಧನಂಜಯ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ ಮತ್ತು ಸುಗ್ರೀವ ಎಂಬ ಐದು ಅನುಭವೀ ಕುಮ್ಕಿ ಆನೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿವೆ. ಜನವರಿ 16ರಿಂದಲೇ ಪುಂಡಾನೆಯನ್ನು ಪತ್ತೆಹಚ್ಚಿ ಹಿಡಿಯುವ ಕಾರ್ಯ ಆರಂಭವಾಗಲಿದೆ. ಸ್ಥಳೀಯರ ತೀವ್ರ ಒತ್ತಾಯದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಕಾರ್ಯಾಚರಣೆಗೆ ಅಧಿಕೃತ ಅನುಮೋದನೆ ನೀಡಿದ್ದಾರೆ.
ಇತ್ತೀಚೆಗೆ ಆಲೂರು ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಶೋಭಾ ಎಂಬ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದ ಘಟನೆ ಜನರಲ್ಲಿ ಭಾರೀ ಆಕ್ರೋಶ ಹುಟ್ಟಿಸಿತ್ತು. ಘಟನೆ ನಂತರ ಗ್ರಾಮಸ್ಥರು ಮೃತದೇಹವನ್ನು ಸ್ಥಳದಿಂದ ಕೊಂಡೊಯ್ಯಲು ನಿರಾಕರಿಸಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಇದೀಗ ಕುಮ್ಕಿ ಆನೆಗಳ ಆಗಮನದೊಂದಿಗೆ ಪುಂಡಾನೆ ಸೆರೆ ಕಾರ್ಯಾಚರಣೆ ಮೇಲೆ ಸಾರ್ವಜನಿಕರ ನಿರೀಕ್ಷೆ ಹೆಚ್ಚಾಗಿದೆ.


