ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿರುವ ಕಠಿಣ ವಲಸೆ ಮತ್ತು ವ್ಯಾಪಾರ ನೀತಿಗಳಿಗೆ ದೇಶದೊಳಗೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೊಸ ಎಚ್1ಬಿ ವೀಸಾಗೆ ಭಾರೀ ಪ್ರಮಾಣದ ಶುಲ್ಕ ವಿಧಿಸುವ ನಿರ್ಧಾರ ಹಾಗೂ ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರಿಕೆಯನ್ನು ಪ್ರಶ್ನಿಸಿ ಅಮೆರಿಕದ ರಾಜ್ಯಗಳು ಮತ್ತು ಸಂಸದರು ಕಾನೂನು ಹಾಗೂ ರಾಜಕೀಯ ಹೋರಾಟ ಆರಂಭಿಸಿದ್ದಾರೆ.
ಎಚ್1ಬಿ ವೀಸಾಗೆ ಸುಮಾರು 90 ಲಕ್ಷ ರೂಪಾಯಿ ಶುಲ್ಕ ವಿಧಿಸುವ ಕ್ರಮವನ್ನು ವಿರೋಧಿಸಿ ಅಮೆರಿಕದ 20 ರಾಜ್ಯಗಳು ಮೆಸಾಚುಸೆಟ್ಸ್ ಜಿಲ್ಲಾ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿವೆ. ಈ ನಿರ್ಧಾರವನ್ನು ಯಾವುದೇ ಸಮರ್ಪಕ ಪ್ರಕ್ರಿಯೆ ಇಲ್ಲದೆ ಜಾರಿಗೆ ತರಲಾಗಿದೆ ಎಂದು ಆರೋಪಿಸಿರುವ ರಾಜ್ಯಗಳು, ಇದರಿಂದ ಆರೋಗ್ಯ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಗಂಭೀರ ಕಾರ್ಮಿಕ ಕೊರತೆ ಉಂಟಾಗುವ ಆತಂಕ ವ್ಯಕ್ತಪಡಿಸಿವೆ.
ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ನೇತೃತ್ವದಲ್ಲಿ ಸಲ್ಲಿಸಲಾದ ದಾವೆಯಲ್ಲಿ, ವಲಸಿಗರ ಮೇಲಿನ ಈ ದಾಳಿ ಅಮೆರಿಕದ ಆರ್ಥಿಕತೆಯನ್ನೇ ದುರ್ಬಲಗೊಳಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಭಾರತೀಯ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಅವಲಂಬಿತವಾಗಿರುವ ಎಚ್1ಬಿ ವೀಸಾ ವ್ಯವಸ್ಥೆಗೆ ಈ ಕ್ರಮ ದೊಡ್ಡ ಹೊಡೆತವಾಗಲಿದೆ ಎನ್ನಲಾಗಿದೆ.
ಇದೇ ವೇಳೆ, ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿರುವ ಟ್ರಂಪ್ ನಿರ್ಧಾರಕ್ಕೂ ವಿರೋಧ ಕೇಳಿಬಂದಿದೆ. ಉತ್ತರ ಕ್ಯಾರೊಲಿನಾ, ಟೆಕ್ಸಾಸ್ ಮತ್ತು ಇಲ್ಲಿನಾಯ್ಸ್ ರಾಜ್ಯಗಳ ಮೂವರು ಪ್ರಭಾವಿ ಸಂಸದರು ಈ ತೆರಿಗೆಯನ್ನು ರದ್ದುಗೊಳಿಸುವಂತೆ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದಾರೆ. ಈ ತೆರಿಗೆ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಹಾನಿ ಉಂಟುಮಾಡುವುದಲ್ಲದೆ, ಅಮೆರಿಕದ ಪೂರೈಕೆ ಸರಪಳಿ ಮತ್ತು ಉದ್ಯೋಗ ಮಾರುಕಟ್ಟೆಯ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

