Saturday, October 18, 2025

ʼಕ್ಷುಲ್ಲಕ ಕಾರಣ ನೀಡಿ ಸಮೀಕ್ಷೆಯಿಂದ ಹೊರಗುಳಿಯುವುದು ಉದ್ದಟತನದ ಪರಮಾವಧಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
 
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ ಎಂದು ಇನ್ಫೊಸಿಸ್‌ನ ಸಹ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ಅವರು ಸ್ವಯಂ ದೃಢೀಕರಣ ಪತ್ರ ನೀಡಿದ್ದಾರೆ ಎಂಬ ವಿಷಯದ ಸಂಬಂಧ ಕಾಂಗ್ರೆಸ್ ಮುಖಂಡ ಬಿ.ಕೆ ಹರಿ ಪ್ರಸಾದ್ ಹರಿಹಾಯಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಸುಧಾಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು ‘ಶ್ರೀಮಂತಿಕೆಯನ್ನು ಸರಳತೆಯಲ್ಲಿ ಬಚ್ಚಿಡುವುದು, ಸಾಮಾಜಿಕ ಸಮೀಕ್ಷೆಯಿಂದ ಮಾಹಿತಿಯನ್ನು ಮುಚ್ಚಿಡುವುದು ಸ್ವಾರ್ಥ ಮನಸ್ಥಿತಿಯ ಮುಖವಾಡದ ಅನಾವರಣ’ ಎಂದು ವಾಗ್ದಾಳಿ ನಡೆಸಿದ್ದಾರೆ.

ದೀನ ದಲಿತರ, ಹಿಂದುಳಿದವರ, ಬಡ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿಪಡಿಸಿ, ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಿಂದ ಮಾತ್ರ ಸಾಧ್ಯವೇ ಹೊರತು, ತೋರಣಿಕೆ, ಪ್ರಚಾರದ ಮೋಹದಿಂದ ಕೂಡಿದ ಸಮಾಜಸೇವೆಯಿಂದ ಅಭಿವೃದ್ದಿ ಮಾಡಲು ಸಾಧ್ಯವಿಲ್ಲ.

ಸಾಮಾಜಿಕ ವ್ಯವಸ್ಥೆಯಲ್ಲಿ ಸರ್ವ ಜನಾಂಗದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿ, ಬಡವರ್ಗದವರ ಏಳಿಗೆಗಾಗಿ ಸರ್ಕಾರ ಸಮರ್ಪಕವಾದ ನೀತಿಗಳನ್ನು ರೂಪಿಸುವುದು ಸಾಂವಿಧಾನಿಕ ಜವಾಬ್ದಾರಿ. ಆದರೆ ಶ್ರೀಮಂತಿಕೆ, ದೊಡ್ಡಸ್ಥಿಕೆಯ ಚಾದರವನ್ನೇ ಹೊದ್ದು ಮಲಗಿದವರು ಕ್ಷುಲ್ಲಕ ಕಾರಣಗಳನ್ನು ನೀಡಿ ಸಾಮಾಜಿಕ ಸಮೀಕ್ಷೆಯಿಂದ ಹೊರಗುಳಿಯುವುದು ಅಷ್ಟೇ ಬೇಜವಾಬ್ದಾರಿ ಎಂದಿದ್ದಾರೆ.

error: Content is protected !!