ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಸ್ಟ್ರಾಟೆಜಿಕ್ ಬ್ಯುಸಿನೆಸ್ ವೆಂಚರ್ಸ್ ಲಿಮಿಟೆಡ್ (RSBVL), ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಣ ಸಂಸ್ಥೆಯಾದ ಸಿಖ್ಯಾ ಎಂಟರ್ಟೈನ್ಮೆಂಟ್ನಲ್ಲಿ ಶೇಕಡಾ 50.1 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿದೆ. ಈ ಬೃಹತ್ ವ್ಯವಹಾರವು ಫೆಬ್ರವರಿ 2, 2026 ರಂದು ಪೂರ್ಣಗೊಂಡಿದ್ದು, ಇದರ ಮೌಲ್ಯ 150 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಈ ಹೂಡಿಕೆಯ ಮೂಲಕ ರಿಲಯನ್ಸ್‌ನ ಕಂಟೆಂಟ್ ವಿಭಾಗವಾದ ಜಿಯೋ ಸ್ಟುಡಿಯೋಸ್, ಮನರಂಜನಾ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ‘ಸ್ತ್ರೀ 2’ ಮತ್ತು ‘ಲಾಪತಾ ಲೇಡೀಸ್’ ಅಂತಹ ಹಿಟ್ ಚಿತ್ರಗಳನ್ನು ನೀಡಿರುವ ಜಿಯೋ ಸ್ಟುಡಿಯೋಸ್‌ಗೆ ಈಗ ಸಿಖ್ಯಾದ ಸೃಜನಶೀಲ ಬಲ ಸಿಕ್ಕಂತಾಗಿದೆ.
ಗುನೀತ್ ಮೊಂಗಾ ಕಪೂರ್ ಮತ್ತು ಅಚಿನ್ ಜೈನ್ ನೇತೃತ್ವದ ಸಿಖ್ಯಾ ಎಂಟರ್ಟೈನ್ಮೆಂಟ್, ಭಾರತೀಯ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಹೊಂದಿದೆ.
‘ದಿ ಎಲಿಫೆಂಟ್ ವಿಸ್ಪರರ್ಸ್’ ಮತ್ತು ‘ಪೀರಿಯಡ್. ಎಂಡ್ ಆಫ್ ಸೆಂಟೆನ್ಸ್’ ಮೂಲಕ ಆಸ್ಕರ್ ಗೆದ್ದಿರುವ ದೇಶದ ಏಕೈಕ ನಿರ್ಮಾಣ ಸಂಸ್ಥೆ ಇದಾಗಿದೆ.
ಪ್ರಮುಖ ಚಿತ್ರಗಳು: ಮಸಾನ್, ಸೂರೈ ಪೊಟ್ರು ಮತ್ತು ಕಥಾಲ್ ನಂತಹ ಚಿತ್ರಗಳ ಮೂಲಕ ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡಿದೆ.
“ಸೃಜನಾತ್ಮಕ ಉತ್ಕೃಷ್ಟತೆ ಮತ್ತು ಸಾಂಸ್ಕೃತಿಕ ಸತ್ಯವನ್ನು ಗೌರವಿಸುವ ಸೃಷ್ಟಿಕರ್ತರೊಂದಿಗೆ ಕೆಲಸ ಮಾಡುವುದು ನಮ್ಮ ಗುರಿ. ಸಿಖ್ಯಾ ಜೊತೆಗಿನ ಈ ಪಾಲುದಾರಿಕೆಯು ಆ ದೃಷ್ಟಿಕೋನದ ಪ್ರತಿಫಲ.” ಜ್ಯೋತಿ ದೇಶಪಾಂಡೆ, ಅಧ್ಯಕ್ಷರು, ಜಿಯೋ ಸ್ಟುಡಿಯೋಸ್.
“ಕಥೆಗಳು ಗಡಿಗಳನ್ನು ಮೀರಿ ಜನರನ್ನು ಸಂಪರ್ಕಿಸುತ್ತವೆ. ಜಿಯೋ ಸ್ಟುಡಿಯೋಸ್ ಸಹಯೋಗದೊಂದಿಗೆ ನಮ್ಮ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸಲು ಮತ್ತು ಹೊಸ ಪ್ರತಿಭೆಗಳನ್ನು ಗುರುತಿಸಲು ನಮಗೆ ದೊಡ್ಡ ವೇದಿಕೆ ಸಿಕ್ಕಿದೆ.” ಗುನೀತ್ ಮೊಂಗಾ ಕಪೂರ್ & ಅಚಿನ್ ಜೈನ್, ಸಂಸ್ಥಾಪಕರು, ಸಿಖ್ಯಾ.



