Tuesday, November 4, 2025

ವಿಶ್ವಕಪ್ ಗೆದ್ರು ಸಂಸ್ಕಾರ ಮರೆತಿಲ್ಲ ನಮ್ಮ ಕ್ಯಾಪ್ಟನ್: ಗುರು ಕಾಣಿಕೆ ಸಲ್ಲಿಸಿದ ಹರ್ಮನ್‌ಪ್ರೀತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಚಿರಸ್ಮರಣೀಯ ಕ್ಷಣ. ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ (ICC Women’s ODI World Cup Final) ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 52 ರನ್ ಅಂತರದ ರೋಚಕ ಜಯ ಸಾಧಿಸಿ ಚೊಚ್ಚಲ ವಿಶ್ವಕಪ್ ಕಿರೀಟವನ್ನು ತಮ್ಮದಾಗಿಸಿಕೊಂಡಿದೆ. ಈ ಮೂಲಕ 36 ವರ್ಷದ ಹರ್ಮನ್‌ಪ್ರೀತ್ ಕೌರ್ ಅತಿಹಿರಿಯ ನಾಯಕಿಯಾಗಿ ಐಸಿಸಿ ವಿಶ್ವಕಪ್ ಗೆದ್ದ ಹೊಸ ದಾಖಲೆ ನಿರ್ಮಿಸಿದ್ದಾರೆ.

ಹದಿನೈದು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಭಾರತೀಯ ತಂಡದ ಅವಿಭಾಜ್ಯ ಅಂಗವಾಗಿರುವ ಹರ್ಮನ್‌ಪ್ರೀತ್ ಕೌರ್ ಹಲವಾರು ಬಾರಿ ಐಸಿಸಿ ಟ್ರೋಫಿ ಗೆಲುವಿನ ಅಂಚಿನಲ್ಲಿ ನಿಂತು ನಿರಾಸೆ ಅನುಭವಿಸಿದ್ದರು. ಆದರೆ ಈ ಬಾರಿ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಟ್ರೋಫಿ ಬರ ನೀಗಿಸಿದ್ದು, ಅವರ ಕಣ್ಣೀರು ಎಲ್ಲರ ಮನ ಮುಟ್ಟಿತು. ಜಯದ ಸಂಭ್ರಮದಲ್ಲಿ ಮೈದಾನದಲ್ಲಿಯೇ ಹರ್ಮನ್‌ಪ್ರೀತ್ ಭಾವುಕರಾಗಿ ತಂಡದ ಹೆಡ್ ಕೋಚ್ ಅಮೂಲ್ ಮಜುಂದಾರ್ ಅವರನ್ನು ಬಿಗಿಯಾಗಿ ಅಪ್ಪಿಕೊಂಡರು.

ಅಷ್ಟೇ ಅಲ್ಲ, ಗುರು ಪರಂಪರೆಯನ್ನು ಕಾಪಾಡುತ್ತಾ ಹರ್ಮನ್‌ಪ್ರೀತ್ ಕೌರ್ ಕೋಚ್ ಮಜುಂದಾರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ದೃಶ್ಯವನ್ನು ಕಂಡ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಪ್ರವಾಹ ಹರಿಸಿದ್ದಾರೆ. ಈ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಗಿ “ಭಾರತೀಯ ಸಂಸ್ಕೃತಿಯ ಸಜೀವ ನಿದರ್ಶನ” ಎಂದು ಕಾಮೆಂಟ್‌ಗಳು ಹರಿದುಬಂದಿವೆ.

ಐಸಿಸಿ ಮುಖ್ಯಸ್ಥ ಜಯ್ ಶಾ ಸಹ ಹರ್ಮನ್‌ಪ್ರೀತ್ ಕೌರ್ ಅವರನ್ನು ಮೈದಾನದಲ್ಲೇ ಗೌರವಿಸಿ ಅಭಿನಂದಿಸಿದರು. ಈ ಜಯದೊಂದಿಗೆ ಹರ್ಮನ್‌ಪ್ರೀತ್ ಕೌರ್ ಕೇವಲ ನಾಯಕಿಯಾಗಿ ಮಾತ್ರವಲ್ಲ, ಭಾರತೀಯ ಮಹಿಳಾ ಕ್ರಿಕೆಟ್‌ಗೆ ನಂಬಿಕೆ, ಶ್ರಮ ಮತ್ತು ಸಂಸ್ಕಾರಗಳ ಸಂಕೇತವಾಗಿ ಹೊರಹೊಮ್ಮಿದ್ದಾರೆ.

error: Content is protected !!