ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ಲೈಫ್‌ಲೈನ್ ಎನಿಸಿಕೊಂಡಿರುವ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಈಗ ದರ ಏರಿಕೆಯ ಭೀತಿ ಎದುರಾಗಿದೆ. ದರ ಪರಿಷ್ಕರಣಾ ಸಮಿತಿಯ ಶಿಫಾರಸಿನಂತೆ ಪ್ರತಿ ವರ್ಷ ಶೇ. 5ರಷ್ಟು ದರ ಹೆಚ್ಚಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸುತ್ತಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
2024ರಲ್ಲಿ ದರ ಪರಿಷ್ಕರಣಾ ಸಮಿತಿಯು ನೀಡಿದ ವರದಿಯನ್ನು ಆಧರಿಸಿ ಫೆಬ್ರವರಿಯಲ್ಲಿ ಟಿಕೆಟ್ ದರವನ್ನು ಶೇ. 71ರಷ್ಟು ಏರಿಸಲಾಗಿತ್ತು. ಈ ವರದಿಯು ಮೆಟ್ರೋದ ಸುಸ್ಥಿರ ನಿರ್ವಹಣೆಗಾಗಿ ಪ್ರತಿ ವರ್ಷ ಶೇ. 5ರಷ್ಟು ದರ ಪರಿಷ್ಕರಣೆ ಮಾಡುವಂತೆ ಸಲಹೆ ನೀಡಿದೆ. ಇದೀಗ ಹೊಸ ಆರ್ಥಿಕ ವರ್ಷ ಹತ್ತಿರವಾಗುತ್ತಿರುವುದರಿಂದ, ಮತ್ತೆ ದರ ಏರಿಕೆಯಾಗುತ್ತದೆಯೇ ಎಂಬ ಆತಂಕ ಪ್ರಯಾಣಿಕರಲ್ಲಿ ಮನೆಮಾಡಿದೆ.
ಬಿಎಂಆರ್‌ಸಿಎಲ್ ದರ ಏರಿಕೆಗೆ ಸಮರ್ಥನೆ ನೀಡಲು ಈ ಕೆಳಗಿನ ಪ್ರಮುಖ ಕಾರಣಗಳನ್ನು ಮುಂದಿಟ್ಟಿದೆ:
2024-25 ರಿಂದ 2029-30ರ ಅವಧಿಯಲ್ಲಿ ನಿಗಮವು ಬರೋಬ್ಬರಿ ₹ 10,422.2 ಕೋಟಿ ಸಾಲ ಮರುಪಾವತಿ ಮಾಡಬೇಕಿದೆ. 2017 ರಿಂದ 2024ರ ಅವಧಿಯಲ್ಲಿ ಸಿಬ್ಬಂದಿ ವೆಚ್ಚ ಶೇ. 42ರಷ್ಟು ಹಾಗೂ ಇಂಧನ ವೆಚ್ಚ ಶೇ. 34ರಷ್ಟು ಹೆಚ್ಚಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೆಟ್ರೋ ನಿರ್ವಹಣೆ ಮತ್ತು ಆಡಳಿತ ವೆಚ್ಚ ಶೇ. 366ರಷ್ಟು ದುಬಾರಿಯಾಗಿದೆ.
ಒಂದೆಡೆ ನಿಗಮವು ಆರ್ಥಿಕ ಕಾರಣಗಳನ್ನು ನೀಡುತ್ತಿದ್ದರೆ, ಇನ್ನೊಂದೆಡೆ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ದರ ಏರಿಕೆಯ ನಿರ್ಧಾರವನ್ನು ಖಂಡಿಸಿವೆ. ಈಗಾಗಲೇ ಕಳೆದ ವರ್ಷವಷ್ಟೇ ದೊಡ್ಡ ಮಟ್ಟದ ಏರಿಕೆ ಕಂಡಿರುವಾಗ, ಪ್ರತಿ ವರ್ಷ ಶೇ. 5ರಷ್ಟು ಹೆಚ್ಚಳ ಮಾಡುವುದು ಜನಸಾಮಾನ್ಯರ ಮೇಲೆ ಹೊರೆಯಾಗುತ್ತದೆ ಎಂದು ಕಿಡಿಕಾರಿದ್ದಾರೆ. ಒಂದು ವೇಳೆ ನಿಗಮವು ದರ ಏರಿಕೆಗೆ ಮುಂದಾದಲ್ಲಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.


