ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 24 ಗಂಟೆಗಳಲ್ಲಿ 300ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿರುವ ಬೆಳವಣಿಗೆ ರಾಷ್ಟ್ರದ ಭದ್ರತಾ ಇತಿಹಾಸದಲ್ಲಿ ಮಹತ್ವದ ತಿರುವಾಗಿ ಪರಿಣಮಿಸಿದೆ. ಒಂದು ಕಾಲದಲ್ಲಿ ಬಾಂಬ್ ಸ್ಫೋಟಗಳು ಮತ್ತು ಹತ್ಯಾಕಾಂಡಗಳಿಂದ ತಲ್ಲಣಗೊಂಡಿದ್ದ ಪ್ರದೇಶಗಳು ಈಗ ಶಾಂತಿಯ ವಾತಾವರಣವನ್ನು ಅನುಭವಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಈ ಬೆಳವಣಿಗೆಯನ್ನು ದೇಶದ ಶಾಂತಿಯತ್ತ ಇಡುತ್ತಿರುವ ದೊಡ್ಡ ಹೆಜ್ಜೆ ಎಂದು ವರ್ಣಿಸಿದ್ದಾರೆ.
ಪ್ರಧಾನಿ ಮೋದಿ ಖಾಸಗಿ ಸುದ್ದಿವಾಹಿನಿಯ ಜಾಗತಿಕ ಶೃಂಗಸಭೆಯಲ್ಲಿ ಮಾತನಾಡಿ, ಕಳೆದ 75 ಗಂಟೆಗಳಲ್ಲಿ ಒಟ್ಟು 303 ನಕ್ಸಲರು ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ. ನಕ್ಸಲ್ ಚಟುವಟಿಕೆಗಳಿಂದ ದಶಕಗಳ ಕಾಲ ಹಿಂಸೆಗೆ ಒಳಗಾಗಿದ್ದ ಪ್ರದೇಶಗಳಲ್ಲಿ ಈಗ ಅಭಿವೃದ್ಧಿಯ ಹಾದಿ ಕಾಣಿಸುತ್ತಿದೆ. ಹಿಂದೆ ಭಯದ ನೆಲೆಯಾಗಿದ್ದ ಬಸ್ತಾರ್ ಜಿಲ್ಲೆಯಲ್ಲಿ ಇದೀಗ ಯುವಕರು “ಬಸ್ತಾರ್ ಒಲಿಂಪಿಕ್ಸ್” ಆಯೋಜಿಸುತ್ತಿರುವುದು ಶಾಂತಿಯ ಹೊಸ ಅಧ್ಯಾಯವನ್ನು ತೆರೆದಿದೆ ಎಂದು ಪ್ರಧಾನಿ ಹೇಳಿದರು.
ಅವರು ಮತ್ತಷ್ಟು ವಿವರಿಸುತ್ತಾ, ಸರ್ಕಾರ ದಾರಿ ತಪ್ಪಿದ ಯುವಕರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಕೈಗೊಂಡಿದೆ ಮತ್ತು ಅದರ ಫಲವಾಗಿ ಈ ಶರಣಾಗತಿ ಸಂಭವಿಸಿದೆ ಎಂದು ತಿಳಿಸಿದರು. ಛತ್ತೀಸ್‌ಗಢದಲ್ಲಿ ಮಾತ್ರ ಒಂದೇ ದಿನ 170 ನಕ್ಸಲರು ಶರಣಾಗಿದ್ದು, ಅವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಶರಣಾಗತಿ ಕ್ರಮದಿಂದ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 125ರಿಂದ ಕೇವಲ 11ಕ್ಕೆ ಇಳಿಕೆಯಾಗಿದೆ. ಇದು ಸರ್ಕಾರದ ಕಠಿಣ ಕ್ರಮಗಳು ಮತ್ತು ಶಾಂತಿಯ ಚಟುವಟಿಕೆಗಳು ಫಲ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.