January20, 2026
Tuesday, January 20, 2026
spot_img

ಯುಕೆ ಮ್ಯೂಸಿಯಂನಿಂದ 600ಕ್ಕೂ ಹೆಚ್ಚು ಭಾರತೀಯ ಕಲಾಕೃತಿಗಳ ಕಳವು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ನಲ್ಲಿ ಭಾರತೀಯ ಕಲಾಕೃತಿಗಳು ಸೇರಿದಂತೆ ಶತಮಾನದ ಹಿಂದಿನ ಹೆಚ್ಚಿನ ಬೆಲೆಬಾಳುವ ಕಲಾಕೃತಿಗಳು ಕಳ್ಳತನವಾಗಿವೆ.

ಯುಕೆಯ ವಸ್ತು ಸಂಗ್ರಹಾಲಯದಲ್ಲಿದ್ದ ದುಬಾರಿ ಮೌಲ್ಯದ ಸುಮಾರು 600ಕ್ಕೂ ಹೆಚ್ಚು ಭಾರತೀಯ ಕಲಾಕೃತಿಗಳನ್ನು ಕಳವು ಮಾಡಲಾಗಿದೆ.

ಕಳೆದ ಸೆಪ್ಟೆಂಬರ್ 25 ರಂದು ರಾತ್ರಿ 1 ರಿಂದ 2 ಗಂಟೆಯ ನಡುವೆ ಈ ವಸ್ತುಗಳನ್ನು ಕಳವು ಮಾಡಲಾಗಿದ್ದು, ಇದೀಗ ಪೊಲೀಸರು ಆರೋಪಿಗಳ ಪತ್ತೆಗೆ ಸಿಸಿಟಿವಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಬ್ರಿಸ್ಟಲ್‌ನ ಬ್ರಿಟಿಷ್ ಸಾಮ್ರಾಜ್ಯ ಮತ್ತು ಕಾಮನ್‌ವೆಲ್ತ್ ವಸ್ತು ಸಂಗ್ರಹಾಲಯದಿಂದ ಸೆಪ್ಟೆಂಬರ್ 25 ರಂದು ರಾತ್ರಿ 600ಕ್ಕೂ ಹೆಚ್ಚು ಭಾರತೀಯ ಕಲಾಕೃತಿಗಳು ಕಳವಾಗಿವೆ. ಇದರಲ್ಲಿ ಬ್ರಿಟಿಷ್ ವಸಾಹತುಶಾಹಿ ಯುಗದ ಭಾರತದ ಹಲವಾರು ಕಲಾಕೃತಿಗಳು ಸೇರಿವೆ.

ಈ ಕುರಿತು ಶಂಕಿತರ ಚಿತ್ರ ಬಿಡುಗಡೆ ಮಾಡಿರುವ ಏವನ್ ಮತ್ತು ಸೋಮರ್‌ಸೆಟ್ ಪೊಲೀಸರು, ಈ ಘಟನೆ ಸೆಪ್ಟೆಂಬರ್ 25ರಂದು ಮುಂಜಾನೆ ನಡೆದಿದ್ದು, ಘಟನೆಯಲ್ಲಿ ನಾಲ್ವರು ಭಾಗಿಯಾಗಿದ್ದರು. ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಆರೋಪಿಗಳನ್ನು ಗುರುತಿಸಲು ಸಾರ್ವಜನಿಕರು ಸಹಾಯ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ಒಬ್ಬ ವ್ಯಕ್ತಿ ಸಾಧಾರಣ ಮೈಕಟ್ಟು, ಬಿಳಿ ಕ್ಯಾಪ್, ಕಪ್ಪು ಜಾಕೆಟ್, ತಿಳಿ ಬಣ್ಣದ ಪ್ಯಾಂಟ್ ಧರಿಸಿದ್ದು, ಇನ್ನೋರ್ವ ತೆಳ್ಳಗಿನ ಮೈಕಟ್ಟು, ಬೂದು ಬಣ್ಣದ ಜಾಕೆಟ್, ಕಪ್ಪು ಪ್ಯಾಂಟ್, ಮತ್ತೊಬ್ಬ ಹಸಿರು ಕ್ಯಾಪ್, ಕಪ್ಪು ಜಾಕೆಟ್, ತಿಳಿ ಬಣ್ಣದ ಶಾರ್ಟ್ಸ್ ಧರಿಸಿದ್ದು ಬಲಗಾಲು ಕುಂಟುತ್ತಾನೆ. ಮತ್ತೋರ್ವ ದೃಢಕಾಯವನ್ನು ಹೊಂದಿದ್ದು, ಎರಡು ಬಣ್ಣ ಮಿಶ್ರಿತ ಜಾಕೆಟ್, ಕಪ್ಪು ಪ್ಯಾಂಟ್ ಧರಿಸಿದ್ದನು.

ಇವರು ಕದ್ದಿರುವ ವಸ್ತುಗಳಲ್ಲಿ ದಂತದ ಬುದ್ಧ, ಸೊಂಟದ ಬೆಲ್ಟ್ ಬಕಲ್ ಸೇರಿವೆ. ಇದರಿಂದ ನಗರಕ್ಕೆ ಅಪಾರ ನಷ್ಟವಾಗಿದೆ. ಇದರಲ್ಲಿ ಹೆಚ್ಚಿನ ವಸ್ತುಗಳು ಉಡುಗೊರೆಯಾಗಿ ಬಂದಿತ್ತು. ಇವು ಬ್ರಿಟಿಷ್ ಇತಿಹಾಸದ ಭಾಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಆದರೆ ಯಾವುದೇ ಮಾಹಿತಿ ಕಂಡು ಬಂದಿಲ್ಲ ಎಂದು ಏವನ್ ಮತ್ತು ಸೋಮರ್‌ಸೆಟ್ ಪೊಲೀಸ್ ಡಿಟೆಕ್ಟಿವ್ ಕಾನ್‌ಸ್ಟೆಬಲ್ ಡ್ಯಾನ್ ಬರ್ಗನ್ ತಿಳಿಸಿದ್ದಾರೆ.

Must Read