ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಪದ್ಮ ಪುರಸ್ಕಾರಗಳ ಘೋಷಣೆ ದೇಶದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಂತಹ ಮುಂದಿನ ವಿಧಾನಸಭಾ ಚುನಾವಣೆ ಎದುರಿಸುವ ರಾಜ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪದ್ಮ ಗೌರವ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ರಾಷ್ಟ್ರೀಯ ಗೌರವಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಲಾಗುತ್ತಿದೆ ಎಂಬ ಟೀಕೆಗಳು ತೀವ್ರಗೊಂಡಿವೆ.
ಕೇರಳಕ್ಕೆ ಈ ಬಾರಿ ಒಟ್ಟು ಎಂಟು ಪದ್ಮ ಪುರಸ್ಕಾರಗಳು ಲಭಿಸಿದ್ದು, ಬಿಜೆಪಿಗೆ ತೀವ್ರ ವಿರೋಧಿಯಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ವಿಎಸ್ ಅಚ್ಯುತಾನಂದನ್ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ನೀಡಿರುವುದು ವಿಶೇಷ ಗಮನ ಸೆಳೆದಿದೆ. ತಮಿಳುನಾಡಿಗೆ 13 ಮತ್ತು ಪಶ್ಚಿಮ ಬಂಗಾಳಕ್ಕೆ 11 ಪುರಸ್ಕಾರಗಳು ಲಭಿಸಿದ್ದರೆ, ಮಹಾರಾಷ್ಟ್ರಕ್ಕೆ ಅತಿ ಹೆಚ್ಚು 15 ಸಾಧಕರಿಗೆ ಪದ್ಮ ಗೌರವ ದೊರೆತಿದೆ.
ಈ ಕುರಿತು ಕಾಂಗ್ರೆಸ್ ಡೇಟಾ ವಿಶ್ಲೇಷಣಾ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ಇದು ಪದ್ಮ ಪ್ರಶಸ್ತಿಗಳ ಚುನಾವಣೆಯಾಗಿದೆ” ಎಂದು ಟೀಕಿಸಿದ್ದಾರೆ. ಈ ಬಾರಿ ಪುರಸ್ಕೃತರಲ್ಲಿ ಶೇ.37 ಮಂದಿ ಚುನಾವಣೆ ನಡೆಯಲಿರುವ ರಾಜ್ಯಗಳಿಂದ ಬಂದವರಾಗಿದ್ದು, ಜನಸಂಖ್ಯೆಯಲ್ಲಿ ಅವರ ಪಾಲು ಕೇವಲ ಶೇ.18 ಮಾತ್ರ ಎಂದು ಅವರು ಉಲ್ಲೇಖಿಸಿದ್ದಾರೆ.
ಇನ್ನೊಂದೆಡೆ, ಮಹಾರಾಷ್ಟ್ರದ ಮಾಜಿ ಗವರ್ನರ್ ಭಗತ್ ಸಿಂಗ್ ಕೋಶ್ಯಾರಿಗೆ ಪದ್ಮಭೂಷಣ ನೀಡಿರುವುದಕ್ಕೆ ಶಿವಸೇನೆ (ಉದ್ಧವ್ ಠಾಕ್ರೆ ಪಾಳಯ) ವಿರೋಧ ವ್ಯಕ್ತಪಡಿಸಿದೆ. ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದ ನಿರ್ಣಯಗಳಿಗೆ ಹೊಣೆಗಾರರಾದವರಿಗೆ ಗೌರವ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಪದ್ಮ ಪುರಸ್ಕಾರಗಳು ಸಾಧನೆಗೆ ಸಲ್ಲುವ ಗೌರವವೇ ಅಥವಾ ರಾಜಕೀಯ ಲೆಕ್ಕಾಚಾರವೇ ಎಂಬ ಪ್ರಶ್ನೆ ಇದೀಗ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ.



