Sunday, October 5, 2025

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಹಿಂದೂಸ್ತಾನಿ ಸಂಗೀತ ಗಾಯಕ ಪಂಡಿತ್ ಚನ್ನುಲಾಲ್ ಮಿಶ್ರಾ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಪಂಡಿತ್ ಚನ್ನುಲಾಲ್ ಮಿಶ್ರಾ ಗುರುವಾರ ಮುಂಜಾನೆ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಕಳೆದ 17-18 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಂಡಿತ್ ಚನ್ನುಲಾಲ್ ಮಿಶ್ರಾ ಇಂದು ನಸುಕಿನ 4 ಗಂಟೆ ಸುಮಾರಿಗೆ ಮನೆಯಲ್ಲಿ ನಿಧನರಾಗಿದ್ದಾರೆ ಎಂದು ಪುತ್ರಿ ನಮ್ರತಾ ಮಿಶ್ರಾ ತಿಳಿಸಿದ್ದಾರೆ. ಅಂತ್ಯಕ್ರಿಯೆ ಸಂಜೆ 5 ಗಂಟೆಗೆ ವಾರಣಾಸಿಯಲ್ಲಿ ನಡೆಯಲಿದೆ.

ಚನ್ನುಲಾಲ್ ಮಿಶ್ರಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಪಂಡಿತ್ ಚನ್ನುಲಾಲ್ ಮಿಶ್ರಾ ಅವರು ತಮ್ಮ ಜೀವನವನ್ನು ಭಾರತೀಯ ಕಲಾ ಪರಂಪರೆಯ ಪೋಷಣೆಗೆ ಮೀಸಲಿಟ್ಟಿದ್ದರು. ಶಾಸ್ತ್ರೀಯ ಸಂಗೀತವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಸಂಸ್ಕೃತಿಯನ್ನು ಪ್ರತಿಷ್ಠಿತ ಮಾಡುವಲ್ಲಿ ಅವರ ಕೊಡುಗೆ ಅಮೂಲ್ಯವಾಗಿದೆ’ ಎಂದು ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮಿಶ್ರಾ ಅವರ ಕಲೆ ಹಾಗೂ ಸಮಾಜ ಸೇವೆಗೆ ಗೌರವ ನಮನ ಸಲ್ಲಿಸಿದ್ದಾರೆ. ಪಂಡಿತ್ ಚನ್ನುಲಾಲ್ ಮಿಶ್ರಾ 2010 ರ ಜನವರಿಯಲ್ಲಿ ಪದ್ಮಭೂಷಣ ಮತ್ತು 2020 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.