ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಯುದ್ಧ ವಿರಾಮದ ಮಧ್ಯಸ್ಥಿಕೆ ವಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಯುದ್ಧಗಳನ್ನು ನಿಲ್ಲಿಸುವುದು ತನ್ನ ಆಸಕ್ತಿಯ ವಿಷಯವೆಂದು ಹೇಳಿರುವ ಟ್ರಂಪ್, ಈಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಕಡಿಮೆ ಮಾಡಲು ಮುಂದಾಗಿದ್ದಾರೆ. ಈ ಯುದ್ಧವನ್ನು ಪರಿಹರಿಸಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿ ನಡೆದ ದಾಳಿಗಳು ಇಬ್ಬರ ನಡುವಿನ ಸಂಬಂಧವನ್ನು ಮತ್ತಷ್ಟು ಕೆಡಿಸಿವೆ. ಪಾಕಿಸ್ತಾನ ಸೇನೆಯು ಅಫ್ಘಾನಿಸ್ತಾನದ ಗಡಿಯ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಅಫ್ಘಾನ್ ಕ್ರಿಕೆಟಿಗರು ಸೇರಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ಅಫ್ಘಾನಿಸ್ತಾನದಲ್ಲಿ ತೀವ್ರ ಆಕ್ರೋಶವನ್ನು ವ್ಯಕತಪಡಿಸಿದ್ದು, ಪಾಕಿಸ್ತಾನದ ವಿರುದ್ಧ ಪ್ರತಿದಾಳಿಯನ್ನೂ ನಡೆಸಿದೆ.
ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಭಯೋತ್ಪಾದಕರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಕಾಬೂಲ್ ಪ್ರದೇಶದಲ್ಲಿ ದಾಳಿ ನಡೆಸಿತ್ತು. ಪಾಕಿಸ್ತಾನವು ಅಫ್ಘಾನಿಸ್ತಾನ ಟಿಟಿಪಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸುತ್ತಿದ್ದು, ಅಫ್ಘಾನಿಸ್ತಾನ ಅದನ್ನು ತಳ್ಳಿಹಾಕಿದೆ. ಇದರ ಮಧ್ಯೆ ಎರಡೂ ರಾಷ್ಟ್ರಗಳು ಪರಸ್ಪರದ ಸೇನಾ ಚಟುವಟಿಕೆಗಳನ್ನು ಗಡಿಯಲ್ಲಿ ಹೆಚ್ಚಿಸಿರುವುದು ಆತಂಕಕಾರಿಯಾಗಿದೆ.
ಈ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ “ಯಾವುದೇ ಯುದ್ಧ ನಡೆದರೂ ಅದನ್ನು ಮೊದಲು ಅಮೆರಿಕ ಪರಿಹರಿಸಬೇಕು. ನಾನು ಜನರ ಜೀವ ಉಳಿಸುವತ್ತ ಗಮನಹರಿಸಿದ್ದೇನೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಸಂಘರ್ಷ ಪರಿಹರಿಸುವುದು ನನಗೆ ಸುಲಭ” ಎಂದು ಹೇಳಿದ್ದಾರೆ. ಒಂದು ವೇಳೆ ಈ ಸಂಘರ್ಷವನ್ನು ಪರಿಹರಿಸಿದರೆ ಅವರು ಪರಿಹರಿಸುವ ಒಂಬತ್ತನೇ ಯುದ್ಧವಾಗಿರುತ್ತದೆ.