ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ವೇಳೆ ಪಾಕಿಸ್ತಾನ ತಂಡವು ಭಾರತ ಎದುರಿನ ಪಂದ್ಯವನ್ನು ಬಾಯ್ಕಾಟ್ ಮಾಡಿದೆ.
ಈ ಮೂಲಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ.
ಪಾಕಿಸ್ತಾನ ಸರ್ಕಾರದ ಅಧಿಕಾರಿಗಳು ಅಧಿಕೃತವಾಗಿ ಎಕ್ಸ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದೆ. ಆದರೆ ಫೆಬ್ರವರಿ 15ರಂದು ಕೊಲಂಬೋದಲ್ಲಿ ನಿಗದಿಯಾಗಿದ್ದ ಭಾರತ ಎದುರಿನ ಪಂದ್ಯವನ್ನು ಪಾಕಿಸ್ತಾನ ತಂಡವು ಬಾಯ್ಕಾಟ್ ಮಾಡಿದೆ ಎಂದು ತಿಳಿಸಿದೆ.
‘ಪಾಕಿಸ್ತಾನ ತಂಡವು ಫೆಬ್ರವರಿ 15ರಂದು ಭಾರತ ವಿರುದ್ದ ಕ್ರಿಕೆಟ್ ಆಡಲು ಮೈದಾನಕ್ಕಿಳಿಯುವುದಿಲ್ಲ’ ಎಂದು ಎಕ್ಸ್ ಮೂಲಕ ಘೋಷಿಸಿದೆ. ಆದರೆ ಪಾಕಿಸ್ತಾನ ತಂಡವು ಯಾವ ಕಾರಣಕ್ಕಾಗಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎದುರಿನ ಮ್ಯಾಚ್ ಬಾಯ್ಕಾಟ್ ಮಾಡಿದೆ ಎನ್ನುವ ವಿಚಾರವನ್ನು ಸ್ಪಷ್ಟಪಡಿಸಿಲ್ಲ.
ಭಾರತ-ಪಾಕ್ ಪಂದ್ಯ ಆರ್ಥಿಕವಾಗಿ ಐಸಿಸಿಗೆ ಬಹಳ ಪ್ರಾಮುಖ್ಯವಾದದ್ದು. ಈ ಪಂದ್ಯದ ಪ್ರಸಾರದಿಂದಲೇ ಬಹುಕೋಟಿ ಲಾಭ ಸಿಗಲಿದೆ. ಪ್ರಾಯೋಜಕರು, ಪ್ರಸಾರಕರು, ಜಾಹೀರಾತುದಾರರಿಗೂ ವಿಶ್ವಕಪ್‌ನಲ್ಲೇ ಈ ಪಂದ್ಯ ಹೆಚ್ಚು ಮಹತ್ವದ್ದು. ಒಂದು ವೇಳೆ ಪಾಕ್ ತಂಡ ಭಾರತ ವಿರುದ್ಧ ಆಡದಿದ್ದರೆ ಐಸಿಸಿಗೆ ಆರ್ಥಿಕ ನಷ್ಟವಾಗುವುದು ಖಚಿತ. ಪ್ರಸಾರಕರಿಗೂ ಇದರಿಂದ ನಷ್ಟ ಉಂಟಾಗಲಿದೆ. ಹಾಗಾಗಿ ಐಸಿಸಿ ಕೂಡ ಪಿಸಿಬಿ ಮೇಲೆ ಹಲವು ನಿರ್ಬಂಧ ಹೇರಬಹುದು. ವಾರ್ಷಿಕವಾಗಿ ನೀಡುವ ಲಾಭಾಂಶದಲ್ಲೂ ಪಾಕಿಸ್ತಾನಕ್ಕೆ ಹಣ ಕಡಿತಗೊಳಿಸುವ ಸಾಧ್ಯತೆ ಇದೆ.



